ನಿಡಗುಂದಿ: ಪಟ್ಟಣದಲ್ಲಿ ವೃದ್ಧನೊಬ್ಬ ವೃದ್ದಾಪ್ಯ ವೇತನದ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಲು ಹೋದಾಗ ಮೂರ್ಛೆ ಹೋದ ಘಟನೆ ಬಗ್ಗೆ ವಿಚಾರಣೆಗಾಗಿ ಶುಕ್ರವಾರ ಕಂದಾಯ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ ನಿಡಗುಂದಿ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದರು.
ತಾಲೂಕಿನ ಹೊಳೆಮಸೂತಿ ಗ್ರಾಮದ ಚಂದ್ರಶೇಖರ ಕಳಸಗೊಂಡ ಎಂಬ (79) ವರ್ಷದ ವಯೋವೃದ್ಧ ವ್ಯಕ್ತಿ ನಿಡಗುಂದಿಗೆ ಅರ್ಜಿ ಸಲ್ಲಿಸಲು ಬಂದಾಗ ಕಚೇರಿಗೆ ಅಲೆದಾಡಿ ಸುಸ್ತಾಗಿ ನಿತ್ರಾಣಗೊಂಡು ಮೂರ್ಛೆ ಹೋದ ಘಟನೆ ಗುರುವಾರ ನಡೆದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಉಪ ವಿಭಾಗಾಧಿಕಾರಿ ಗೆಣ್ಣೂರ, ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಲು ಬಂದ ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಿದರು.
ನಂತರ ಚಂದ್ರಶೇಖರ ಕಳಸಗೊಂಡ ಅವರ ಪುತ್ರ ಮಲ್ಲಿಕಾರ್ಜುನನ್ನು ಕರೆಯಿಸಿ ಗುರುವಾರ ನಡೆದ ಘಟನೆ ಬಗ್ಗೆ ಹೇಳಿಕೆ ಪಡೆದರು. ನಮ್ಮ ತಂದೆಗೆ ಫೀಟ್ಸ್ (ಮೂರ್ಛೆ ರೋಗ) ರೋಗ ಇತ್ತು ಎಂದು ಮಲ್ಲಿಕಾರ್ಜುನ ತಿಳಿಸಿದರು.
ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ ಬಗ್ಗೆ ಪ್ರಶ್ನಿಸಿದ ಗೆಣ್ಣೂರ, ವೃದ್ಧಾಪ್ಯ ವೇತನ ಇರುವುದು ಬಡವರಿಗೆ ಮಾತ್ರ ಎಂದರು. ಕಳಸಗೊಂಡ ಅವರಿಗೆ ಒಟ್ಟು 8 ಎಕರೆ ನೀರಾವರಿ ಜಮೀನಿದ್ದು ಕಬ್ಬು ಬೆಳೆಯುತ್ತಾರೆ. ಮೂವರು ಪುತ್ರರಿದ್ದು ಎಲ್ಲರೂ ಸ್ವಯಂ ಉದ್ಯೋಗದಲ್ಲಿ ಸ್ಥಿತಿವಂತರಾಗಿದ್ದಾರೆ. ತಂದೆ, ತಾಯಿಯನ್ನು ಸಾಕುವುದು ಮಕ್ಕಳ ಕೆಲಸ, ವೃದ್ಧಾಪ್ಯ ವೇತನ ಇರುವುದು ಬಡ ವೃದ್ಧರಿಗೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕಂದಾಯ ನಿರೀಕ್ಷಕರ ವರದಿ ಆಧಾರದ ನಂತರ ವೇತನ ಮಂಜೂರಿ ಮಾಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಗೆಣ್ಣೂರ ತಿಳಿಸಿದರು.
ಘಟನೆ ಕಚೇರಿಯಲ್ಲಿ ನಡೆದಿಲ್ಲ: ಗುರುವಾರದ ಘಟನೆ ಬಗ್ಗೆ ಎಲೆಕ್ಟ್ರಾನಿಕ್ ಮಾಧ್ಯಮ ಸೇರಿದಂತೆ ರಾಜ್ಯಾದ್ಯಂತ ಕಚೇರಿಯಲ್ಲಿಯೇ ಮೂರ್ಛೆ ಹೋಗಿದ್ದಾರೆ, ಸಿಬ್ಬಂದಿ ಯಾರೂ ಆಸ್ಪತ್ರೆಗೆ ಸೇರಿಸಿಲ್ಲ ಎಂದು ಪ್ರಚಾರವಾಗಿದೆ. ಘಟನೆಯ ನೈಜತೆ ಅರಿಯಲು ಪರಿಶೀಲನೆ ನಡೆಸಿದ್ದು ಘಟನೆ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿಲ್ಲ ಎಂದು ಎ.ಸಿ. ಸೋಮಲಿಂಗ ಗೆಣ್ಣೂರ ಸ್ಪಷ್ಟಪಡಿಸಿದರು.
ತಹಶೀಲ್ದಾರ್ ಕಚೇರಿ ಪಕ್ಕದ ದೇವಸ್ಥಾನದಲ್ಲಿ ವೃದ್ಧ ಮೂರ್ಛೆ ಹೋಗಿದ್ದಾರೆ. ಅಲ್ಲಿಯ ಜನ ಆಸ್ಪತ್ರೆಗೆ ಸೇರಿಸಿದ್ದಾರೆ. ಕಚೇರಿಯಲ್ಲಾಗಿದ್ದರೇ ಸಿಬ್ಬಂದಿಗಳು ತಕ್ಷಣವೇ ಆಸ್ಪತ್ರೆಗೆ ಸೇರಿಸುತ್ತಿದ್ದರು ಎಂದು ಗೆಣ್ಣೂರ ಹೇಳಿದರು. ತಹಶೀಲ್ದಾರ್ ಇಸ್ಮಾಯಿಲ್ ಮುಲ್ಕಿಸಿಪಾಯಿ, ಹಿರೇಮಠ ಇದ್ದರು.