ನಿಡಗುಂದಿ: ಅತ್ಯಂತ ಕೆಳಮಟ್ಟದಿಂದ ಕಷ್ಟಪಟ್ಟು ಮೇಲೆ ಬಂದಿದ್ದು, ತಾವು ಸರ್ವ ಸಮುದಾಯವನ್ನು ಪ್ರೀತಿಸುವ ಜತೆಗೆ ಎಲ್ಲರೊಂದಿಗೆ ಬೇರೆತು ಹೋಗುವ ಕಾರ್ಯವೇ ಸತತ ಹ್ಯಾಟ್ರಿಕ್ ಗೆಲುವಿನ ಗುಟ್ಟಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸ್ಥಳೀಯ ರುದ್ರೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಕಾರ್ಯಕರ್ತರಿಗೆ, ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಅಧಿಕಾರ ಎಂಬುದು ಯಾರ ಆಸ್ತಿಯಲ್ಲ. ಅದು ಜನ ನೀಡುವ ಭಿಕ್ಷೆ. ಅಧಿಕಾರ ದೊರೆತಾಗ ದರ್ಪದಿಂದ ಎಂದಿಗೂ ನಡೆದುಕೊಂಡ ವ್ಯಕ್ತಿ ನಾನಲ್ಲ. ಅಧಿಕಾರ ನೀಡುವಂತೆ ದುಂಬಾಲು ಬೀಳುವ ಜಾಯಾಮಾನ ನನ್ನದಲ್ಲ. ಅದರಂತೆ ಎಂದೂ ಕೂಡಾ ಅಧಿಕಾರ ನನ್ನನ್ನು ಕೈಬಿಟ್ಟಿಲ್ಲ ಎಂದರು.
ಕಳೆದ 70 ವರ್ಷಗಳಿಂದ ದೇಶವನ್ನು ಆಳಿದವರು ದೇಶದ ಸಂಪತ್ತನ್ನು ಲೂಟಿಹೊಡದು ತಮ್ಮ ಖಜಾನೆ ತುಂಬಿದ್ದಾರೆ. ಹಿಂದೆ ಜನತೆ ಎಂಪಿಗಳನ್ನು ಆಯ್ಕೆ ಮಾಡಿ ಕಳಿಸಿದಾಗ ಅವರೆಲ್ಲ ಕೂಡಿಕೊಂಡು ಪ್ರಧಾನಿಯನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಈಗ ಪ್ರಧಾನಿ ಮೋದಿ ಅವರೇ ಎಂಪಿಗಳನ್ನು ಆಯ್ಕೆ ಮಾಡಿದ್ದಾರೆ. ಮೋದಿಯವರ ಮೇಲಿಟ್ಟಿರುವ ಜನರ ನಂಬಿಕೆ ಅಪಾರವಾದದ್ದು. ಇದರಿಂದಲೇ ಯಾರು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇನೆ. ಸಾವಿರರಾರು ಕೋಟಿ ಹಣದಲ್ಲಿ ರಸ್ತೆಗಳನ್ನು ನಿರ್ಮಿಸಿದ್ದೇನೆ. ವಿವಿಧ ಸಮುದಾಯ ಭವನ, ಶಾಲೆಗಳ ಅಭಿವೃದ್ಧಿಗೆ ಹಣ ನೀಡಿದ್ದೇನೆ. ಆದರೆ, ಎಂದಿಗೂ ಎಲ್ಲೂ ನನ್ನ ಹೆಸರನ್ನು ಹಾಕಿಕೊಂಡಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ಜಾಯಮಾನ ನನ್ನದು. ಎಲ್ಲರನ್ನು ಸಮಾನವಾಗಿ ಕಂಡು ಮುನ್ನಡೆದಾಗ ಮಾತ್ರ ಸುಂದರ ರಾಜಕಾರಣ ಮಾಡಲು ಸಾಧ್ಯ ಎಂದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ನಿವೃತ್ತ ಪ್ರಾಂಶುಪಾಲ ಶ್ರೀಶೈಲಪ್ಪ ರೇವಡಿ, ಪ್ರಮೋದ ಕುಲಕರ್ಣಿ ಮಾತನಾಡಿ, ಈ ಭಾರಿ ದೇಶದ ಜನತೆ ದೇಶಭಕ್ತ ನರೇಂದ್ರ ಮೋದಿಯವರ ಮೇಲೆ ನಂಬಿಕೆಯನ್ನಿಟ್ಟು ಸ್ವಯಂಪ್ರೇರಿತವಾಗಿ ಮತ ಚಲಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ. ಭಾರತವನ್ನು ಕನಿಷ್ಠವಾಗಿ ಕಾಣುತ್ತಿದ್ದ ದೇಶಗಳೆಲ್ಲ ಇಂದು ಭಾರತದ ಮುಂದೆ ಮಂಡಿಯೂರಿ ಕುಳಿತಿವೆ. ದೇಶದ 50ಕ್ಕೂ ಹೆಚ್ಚಿನ ಸೈನಿಕರನ್ನು ಕಳೆದುಕೊಂಡಾಗ ಈಡಿ ದೇಶವೇ ಶತ್ರು ದೇಶಕ್ಕೆ ಪ್ರತ್ತುತ್ತರ ನೀಡುವ ಸಂಕಲ್ಪ ಮಾಡಿತ್ತು. ಆದರೆ, ಜನತೆ ಊಹಿಸದ ರೀತಿಯಲ್ಲಿ ಶತ್ರು ದೇಶಕ್ಕೆ ನುಗ್ಗಿ ಏರ್‌ಸ್ಟ್ರೈಕ್ ದಾಳಿ ನಡೆಸಿ ಸುಮಾರು 350ಕ್ಕೂ ಹೆಚ್ಚಿನ ಭಯೋತ್ಪಾದಕರನ್ನು ಹೊಡೆದುರುಳಿಸಿದ ನರೇಂದ್ರ ಮೋದಿ, ಜನರ ಹೃದಯದಲ್ಲಿ ನೆಲೆಯೂರಿ ದೇಶಭಕ್ತರಾದರು. ದೇಶ ಕಟ್ಟುವ ಅವರ ಕಾರ್ಯಕ್ಕೆ ನಾವೆಲ್ಲ ಚಿರಋಣಿಯಾಗಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಪ್ರಕಾಶ ಅಕ್ಕಲಕೋಟ್, ಬಿ.ಕೆ ಕಲ್ಲೂರ, ಶಂಕರಗೌಡ ಪಾಟೀಲ ಮಾತನಾಡಿದರು. ಜಗದೀಶ ಕೊಟ್ರಶೆಟ್ಟಿ, ಬಸವರಾಜ ಕುಂಬಾರ, ಶಿವಾನಂದ ಮುಚ್ಚಂಡಿ, ಶಂಕರ ರೇವಡಿ, ಪ್ರಹ್ಲಾದ ಪತ್ತಾರ, ಪದ್ಮಾವತಿ ಗುಡಿ, ಬಾಲಚಂದ್ರ ನಾಗರಾಳ, ಯಮನಪ್ಪ ಆಲೂರ, ಶಿವಯ್ಯ ಅರಳಲದಿನ್ನಿ, ಶಾಂತಪ್ಪ ಮನಗೂಳಿ, ಶೇಖರ ದೊಡಮನಿ, ಮುದ್ದಪ್ಪ ಯಳ್ಳಿಗುತ್ತಿ, ಡಾ| ಸಂಗಮೇಶ ಗೂಗಿಹಾಳ, ದಲಿತ ಮುಖಂಡ ಸಿಂದೂರ ಬೈರವಾಡಗಿ, ವಸಂತ ಹೊಳೆಯನ್ನವರ, ಮುತ್ತಪ್ಪ ವಡವಡಗಿ, ಶಂಕರ ಗುಂಡಿನಮನಿ, ಸುಭಾಸ ಕಾಳಿ, ರುದ್ರು ಚಟ್ಟೇರ, ಯಲ್ಲನಗೌಡ ಪಾಟೀಲ, ಹುಲಿಯಪ್ಪ ವಡ್ಡರ ಇದ್ದರು. ಸ್ಥಳೀಯ ರುದ್ರೇಶ್ವರ ಸಂಸ್ಥಾನ ಕಮಿಟಿ, ನಿಡಗುಂದಿ ಹಾಗೂ ಸುತ್ತಲಿನ ಗ್ರಾಮಗಳ ಬಿಜೆಪಿ ಪದಾಧಿಕಾರಿಗಳ ಮತ್ತು ಮಾದಿಗ ಮೀಸಲಾತಿ ಹೋರಾಟ ಸಮಿತಿ, ವಿವಿಧ ಸಂಘಗಳ ಮುಖ್ಯಸ್ಥರು ಸಂಸದ ರಮೇಶ ನಿಗಜಿಣಗಿ ಅವರನ್ನು ಸನ್ಮಾನಿಸಿದರು.