Advertisement

ನದಿ ತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ

04:17 PM Aug 07, 2019 | Naveen |

ನಿಡಗುಂದಿ: ಕೃಷ್ಣಾ ನದಿ ತೀರದಲ್ಲಿ ಪ್ರವಾಹದಿಂದ ಜಲಾವೃತವಾದ ತಾಲೂಕಿನ ಹೊಳೆಮಸೂತಿ ಗ್ರಾಮಕ್ಕೆ ಜಿಲ್ಲಾಧಿಕಾರಿ ವೈ. ಎಸ್‌. ಪಾಟೀಲ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಅಂತರ್ಜಲ ಹೆಚ್ಚಳದಿಂದಾಗಿ ಹೊಳೆಮಸೂತಿ ಗ್ರಾಮದಲ್ಲಿ ಬಸಿ ನೀರು ಸಮಸ್ಯೆಯಿಂದ ಎದುರಿಸುತ್ತಿರುವ ವಿವಿಧ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿ ಬಾರಿ ಪ್ರವಾಹ ಬಂದಾಗ ಈ ರೀತಿಯ ಸಮಸ್ಯೆ ಎದುರಿಸುವಂತಾಗಿದೆ ಎಂದು ಜನರು ಅಳಲು ತೊಡಿಕೊಂಡರು.

ನಂತರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಲೆ ಶಿಕ್ಷಕರು ಕಾಂಪೌಂಡ್‌ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ವಿನಂತಿಸಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಕೃಷ್ಣಾ ನದಿಗೆ ಸಾಕಷ್ಟು ನೀರು ಹರಿಸಲಾಗುತ್ತಿದೆ. ಇದರಿಂದ ನದಿ ತೀರದ ಜಮೀನುಗಳು ಜಲಾವೃತಗೊಂಡಿವೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು.

Advertisement

ಪ್ರವಾಹ ಬಂದಾಗ ಪರಿಹಾರ ಪಡೆದು ಬೇರೆಡೆ ಸ್ಥಳಾಂತರವಾಗಿ ನಂತರ ಇಳಿಮುಖವಾದಾಗ ಮತ್ತೆ ಅದೇ ಸ್ಥಳದಲ್ಲಿ ವಾಸಿಸುತ್ತಾರೆ. 2005ರಿಂದ ಇದುವರೆಗೆ ಸಾಕಷ್ಟು ಗ್ರಾಮಗಳು ಸ್ಥಳಾಂತರಗೊಂಡಿದ್ದನ್ನು ಕಾಣಬಹುದು. ಹೀಗಾಗಿ ಗ್ರಾಮಸ್ಥರೆಲ್ಲ ಸೇರಿ ನಿಗದಿತ ಸ್ಥಳ ತಿಳಿಸಿದರೆ ಸ್ಥಳಾಂತರ ಕುರಿತು ಸರಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿಗಳು ಕೂಡ ಎಲ್ಲ ರೀತಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಜತೆಗೆ ಶಾಸಕರು, ಕೆಬಿಜೆಎನ್‌ಎಲ್ ಅಧಿಕಾರಿಗಳು, ತಹಶೀಲ್ದಾರ್‌ ಸೇರಿದಂತೆ ನಮ್ಮೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಹೇಳಿದ್ದಾರೆ. ಸಭೆಯಲ್ಲಿ ಈ ಕುರಿತು ಸಾಧಕ ಬಾಧಕ ಚರ್ಚಿಸಲಾಗುವುದು. ಸದ್ಯ ಬೇಕಾಗುವ ತಾತ್ಕಾಲಿಕ ಸೇವೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಸ್ವಾಧಿಧೀನ ಮಾಡಿಕೊಂಡ ಪ್ರದೇಶ ಹೊರತುಪಡಿಸಿ ಹೆಚ್ಚವರಿ ಪ್ರದೇಶದಲ್ಲಿ ಉಂಟಾದ ಬೆಳೆ ಹಾನಿ ಕುರಿತು ಸಮೀಕ್ಷೆ ಮಾಡಿ ಸರಕಾರದ ಗಮನಕ್ಕೆ ತರಲಾಗುವುದು. ಜತೆಗೆ ಜಲಾವೃತಗೊಂಡ ಭೂಮಿ ಸ್ವಾಧೀನ ಕುರಿತು ಸಭೆಯಲ್ಲಿ ಚರ್ಚಿಸಿ ಸರಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ತಾತ್ಕಾಲಿಕ ಪರಿಹಾಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅನೇಕ ಸ್ಥಳಗಳಿಗೆ ಭೇಟಿ ಮಾಡಿದ್ದೇವೆ. ಆಲಮಟ್ಟಿ ಜಲಾಶಯದಿಂದ ನದಿಗೆ 4.5 ಲಕ್ಷ ಕ್ಯೂಸೆಕ್‌ವರಗೆ ನೀರು ಹರಿಸಿದರೂ ಗ್ರಾಮಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಹೆಚ್ಚುವರಿ ಪ್ರದೇಶದಲ್ಲಿ ಜಲಾವೃತಗೊಂಡ ಬೆಳೆಗಳಿಗೆ ಬೆಳೆ ಪರಿಹಾರ ಕಲ್ಪಿಸಲಾಗುವುದು. ಹಾವುಗಳು ಭಅರದಂತೆ ಆ್ಯಂಟಿ ಸ್ನೇಕ್‌ ವೆನಮ್‌ ಬಳಸಲು ಹೇಳಲಾಗಿದೆ. ಜತೆಗೆ ಯಾವುದೆ ರೋಗಗಳು ಬರದಂತೆ ತಡೆಯಲು ಆರೋಗ್ಯ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದರು.

ಜಿಪಂ ಸಿಇಒ ವಿಕಾಸ ಸುರುಳಕರ, ಎಸ್‌ಪಿ ಪ್ರಕಾಶ ನಿಕಂ, ಬಸವನ ಬಾಗೇವಾಡಿ ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ, ಉಪತಹಶೀಲ್ದಾರ್‌ ಶ್ರೀಶೈಲ ರಾಗಪ್ಪಗೋಳ, ಕೆಬಿಜೆಎನ್‌ಎಲ್ ಅಧಿಕಾರಿಗಳಾದ ಬಸವರಾಜ ಹಾಗೂ ಚಲವಾದಿ, ಕಂದಾಯ ನಿರೀಕ್ಷಕ ನಾನಾಗೌಡ ಪಾಟೀಲ, ಕಾಳಗಿ ವೈದ್ಯಾಧಿಕಾರಿ ವೈದ್ಯ, ಎಂ.ಬಿ. ಮಾಶೆಟ್ಟಿ, ಎ.ಎಸ್‌. ಜಾರಡ್ಡಿ, ಸಂತೋಷ ಬಳಿಗೇರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next