ನಿಡಗುಂದಿ: ಬಾನೆತ್ತರಕ್ಕೆ ನೆಗೆತ ಚಿತ್ತಾಕಾರದ ಮದ್ದುಗಳು, ಮಿಂಚಿನಂತೆ ಕಲರ್ ಫುಲ್ ಹೊಳೆಯುವ ನಾಗರ ಹಾವು, ಶಿವನ ತ್ರೀಶೂಲ, ಕಿವಿ ಗುರುಗುಟ್ಟುವ ಚಕ್ರಗಳು, ಮಳೆ ಹಣಿಯಂತೆ ಮೇಲಿಂದ ಬೀಳುವ ಬೆಂಕೆ ಉಂಡೆಗಳು.
ಹೌದು, ಇಂತ ಮನಮೋಹಕ ದೃಶ್ಯಗಳು ಬುಧವಾರ ಸಂಜೆ ಪಟ್ಟಣದ ರುದ್ರೇಶ್ವರ ಜಾತ್ರೆ ನಿಮಿತ್ತ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಮದ್ದು ಸುಡುವ ಪ್ರದೇಶದಲ್ಲಿ ಕಂಡ ಬಂದವು.
ಒಂದರ ಮೇಲೊಂದು ಮದ್ದುಗಳು ಕಿವಿಗಟ್ಟುವ ಸದ್ದು ಇದ್ದರೆ. ಅದರ ಮಧ್ಯೆ ನಾನಾ ಭಂಗಿಯ ಚಿತ್ರದ ಮದ್ದುಗಳು ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದ್ದವು. ನಾಗರಹಾವು ಭಂಗಿಯಲ್ಲಿ ಕಂಡ ಮದ್ದು ಸುಂದರ ಲೈಟಿನಂತೆ ಕಂಗೊಳಿಸುತ್ತಿದ್ದರೆ. ಇತ್ತ ಚಕ್ರದ ಆಕಾರದಲ್ಲಿದ್ದ ಮದ್ದು ಸುರ್ ಎನ್ನುವ ಸದ್ದು ಮನಸ್ಸನ್ನು ರೋಮಾಂಚನಗೊಳಿಸುತ್ತಿತ್ತು. ತ್ರೀಶೂಲದಲ್ಲಿ ಕಂಡ ಸುಂದರ ಬೆಳಕಿನ ಮದ್ದು ಸುತ್ತಲಿನ ಜನರ ಕೇಕೆ, ಸಿಳ್ಳೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿತ್ತು. ಒಟ್ಟಾರೆ ಸುಮಾರು ಒಂದು ಗಂಟೆಗಳ ಅವಧಿಯಲ್ಲಿ ವಿವಿಧ ಆಕಾರದಲ್ಲಿದ್ದ ಮದ್ದುಗಳು ಸಿಡಿದು ಯುವಕರ ಮನವನ್ನು ತಣಿಸುವಂತಾಗಿತ್ತು. ಮದ್ದು ಸುಡುವ ಕಾರ್ಯಕ್ರಮದಲ್ಲಿ ಜನಜಂಗುಳಿ ಸೇರಿತ್ತು. ಸಂಜೆ ರಥೋತ್ಸವ ಮುಗಿಯುತ್ತಿದ್ದಂತೆ ಯುವಕರು, ಮಹಿಳೆಯರು ಶಾಲೆ ಆವರಣದತ್ತ ಹೆಜ್ಜೆ ಹಾಕಿದರು. ಮದ್ದು ಸುಡುವ ಕಾರ್ಯಕ್ರಮ ಒಂದು ಗಂಟೆಗೂ ಹೆಚ್ಚು ನಡೆಯಿತು.
ಉದ್ಘಾಟನೆ: ಜಾತ್ರೆಯಲ್ಲಿ ಮದ್ದು ಸುಡುವ ಕಾರ್ಯಕ್ರಮವೆಂದರೆ ವಿಜಯಪುರದ ಹಾಗೂ ಸೊಲ್ಲಾಪುರದ ಸಿದ್ದೇಶ್ವರ ಜಾತ್ರೆಯಲ್ಲಿ ಕಾಣಬಹುದಾಗಿತ್ತು. ಜನತೆ ಆ ಕಾರ್ಯಕ್ರಮವನ್ನು ಸವಿಯಲು ಹೋಗುವಂತಾಗಿತ್ತು. ಆದರೆ, ಆ ಸವಿಯನ್ನು ರುದ್ರೇಶ್ವರ ಜಾತ್ರಾ ಕಮಿಟಿ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದು ಮುತ್ತಗಿ ರುದ್ರಮುನಿ ಶ್ರೀಗಳು ಹೇಳಿದರು.
ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು ಮಾತನಾಡಿ, ಸ್ಥಳೀಯ ರುದ್ರೇಶ್ವರ ಸಂಸ್ಥಾನ ಮಠದ ಜಾತ್ರೆ ಕಳೆದ ಮೂರು ದಿನಗಳಿಂದ ಅತ್ಯಂತ ವಿಜೃಂಭನೆಯಿಂದ ನಡೆದಿದೆ. ಭಕ್ತರು ಇಷ್ಟಾರ್ಥಗಳನ್ನು ಪೂರೈಸುತ್ತ ಅಪಾರ ಭಕ್ತ ಸಮೂಹವನ್ನು ಹೊಂದಿ ಧಾರ್ಮಿಕ ಕ್ಷೇತ್ರವಾಗಿ ರುದ್ರೇಶ್ವರ ಸಂಸ್ಥಾನ ಮಠ ಮುನ್ನಡೆಯುತ್ತಿದೆ ಎಂದರು.
ಜೆಡಿಎಸ್ ಮುಖಂಡ ಸೋಮನಗೌಡ (ಅಪ್ಪುಗೌಡ) ಪಾಟೀಲ ಮಣಗೂಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ನಿವೃತ್ತ ಪ್ರಾಂಶುಪಾಲ ಶ್ರೀಶೈಲಪ್ಪ ರೇವಡಿ, ಪಪಂ ಸದಸ್ಯ ಶಂಕರ ರೇವಡಿ, ಶಿವಾನಂದ ಅವಟಿ, ರೇವಣಕುಮಾರ ಹೊಸಮನಿ, ಈರಣ್ಣ ಚಟ್ಟೇರ ಇದ್ದರು.
ಮೊಬೈಲ್ ನಲ್ಲಿ ಸೆರೆ
ಒಂದು ಗಂಟೆವರೆಗೆ ನಡೆದ ಮದ್ದು ಸುಡುವ ಕಾರ್ಯಕ್ರಮದಲ್ಲಿ ಸೇರಿದ್ದ ಅನೇಕರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಚಿತ್ರಿಕರಿಸಿ ತಮ್ಮ ವಾಟ್ಸ್‌ಆ್ಯಫ್, ಫೇಸ್‌ಬುಕ್‌ಗೆ ರವಾಣಿಸಿದರು. ಇನ್ನೂ ಕೆಲವರು ಫೇಸ್‌ಬುಕ್ ಲೈವ್‌ನಲ್ಲಿ ಸೆರೆಹಿಡಿದು ತಮ್ಮ ದೂರದ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಜಾತ್ರೆಯ ಕಾರ್ಯಕ್ರಮ ವೀಕ್ಷಣೆ ಮಾಡಿಸಿದರೂ ಒಟ್ಟಾರೆ ಮದ್ದು ಸುಡುವ ಕಾರ್ಯಕ್ರಮ ಜಾತ್ರೆಯ ಕಳೆಯನ್ನು ಹೆಚ್ಚಿಸಿತ್ತು.