Advertisement

ನೈಸ್‌ ಗೋಮಾಳ ಒತ್ತುವರಿ: ಭೂಗಳ್ಳರ ತೆರವಿಗೆ ಡಿಸಿ ಆದೇಶ

12:03 PM Nov 21, 2017 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲೂಕಿನ ನೈಸ್‌ ರಸ್ತೆಗೆ ಹೊಂದಿಕೊಂಡಿರುವ ಪಿಲ್ಲಗಾನಹಳ್ಳಿಯಲ್ಲಿರುವ 199 ಎಕರೆಗೂ ಅಧಿಕ ಸರ್ಕಾರಿ ಗೋಮಾಳ ಜಮೀನಿನ ಮೇಲೆ ಇದೀಗ ಭೂಗಳ್ಳರ ಕಣ್ಣು ಬಿದ್ದಿದೆ. ಸಾಮಾಜಿಕ ಸಂಘಟನೆಗಳ ಹೆಸರೇಳಿಕೊಂಡು ರಾತ್ರೋ ರಾತ್ರಿ ಸೈಟ್‌ ನಿರ್ಮಾಣ ಹಾಗೂ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಂಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. 

Advertisement

ಈ ಬಗ್ಗೆ ಬಂದ ದೂರುಗಳ ಬೆನ್ನಲ್ಲೇ ನಗರ ಜಿಲ್ಲಾಧಿಕಾರಿ ವಿ. ಶಂಕರ್‌ ಸೋಮವಾರ ಅಧಿಕಾರಿಗಳೊಂದಿಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ, ಅನಧಿಕೃತವಾಗಿ ನಿವೇಶನ ನಿರ್ಮಾಣವಾಗುತ್ತಿರುವ ಭೂಮಿ ಒತ್ತುವರಿ ತೆರವುಗೊಳಿಸುವಂತೆ ಅಧೀನ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಭೇಟಿ ವೇಳೆ ಹಲವು ಮಂದಿ ಜಾಗ ಒತ್ತುವರಿ ಮಾಡಿಕೊಳ್ಳುವುದು ಕಂಡು ಬಂತು. ಜೊತೆಗೆ ಸ್ಥಳೀಯರು ಮಾಹಿತಿ ಸಹ ನೀಡಿದರು. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ಈಗಾಗಲೇ ಹಲವು ವರ್ಷಗಳಿಂದ ವಾಸವಿರುವ ಮನೆಗಳನ್ನು ತೆರವುಗೊಳಿಸಬೇಡಿ.

ಆದರೆ, ಅನಧಿಕೃತವಾಗಿ ಹಾಕಿಕೊಂಡಿರುವ ಶೆಡ್‌ ಹಾಗೂ ಸೈಟ್‌ಗಳನ್ನು ಕೂಡಲೇ ವಶಕ್ಕೆ ಪಡೆದುಕೊಂಡು ಬೇಲಿ ಅಳವಡಿಸಿ. ಒತ್ತುವರಿದಾರರು ಪ್ರಭಾವಶಾಲಿಗಳಾದರೂ ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿ ಎಂದು ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆರೊಪಿಗಳು ನಾಪತ್ತೆ!: ನೈಸ್‌ ರಸ್ತೆಗೆ ಹೊಂದಿಕೊಂಡಂತಿರುವ ಈ ಜಾಗದಲ್ಲಿ ಜಮೀನಿನ ಬೆಲೆ ಗಗನಕ್ಕೇರಿದೆ. ಹೀಗಾಗಿ ಹಲವು ಮಂದಿ ಸಾಮಾಜಿಕ ಸಂಘಟನೆಗಳ ಹೆಸರಿನಲ್ಲಿ ಕೆಲ ಜಾಗವನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟಕ್ಕೆ ಮುಂದಾಗಿದ್ದಾರೆ.

Advertisement

ಆದರೆ, ಯಾರೊಬ್ಬರ ಬಳಿಯೂ ಜಮೀನು ಮುಂಜೂರಾದ ಬಗ್ಗೆ ದಾಖಲೆಗಳಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದರು. ಈ ಪೈಕಿ ಸ್ಥಳೀಯರಾದ ಮುನಿರಾಜು, ಚಂದು, ಖುರೇಶಿ, ಮಾರಣ್ಣ, ಚಾಂದ್‌ ಪಾಷ ಮುಂತಾದವರು ಅಕ್ರಮವಾಗಿ ಖಾಲಿ ಜಾಗದಲ್ಲಿ ನಿವೇಶನ ವಿಂಗಡಿಸಿ ನಕಲಿ ದಾಖಲೆಗಳ ಸಹಾಯದಿಂದ ಅಮಾಯಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿದ್ದಾಗಿ ಅಧಿಕಾರಿ ತಿಳಿಸಿದರು.

ಮೂರುವರೆ ಸಾವಿರ ಅರ್ಜಿಗಳು ಬಾಕಿ!: ಮತ್ತೂಂದೆಡೆ ಗೋಮಾಳ ಜಾಗದಲ್ಲಿ ಸಾವಿರಾರು ಮಂದಿ ಈಗಾಗಲೇ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಈ ಸಂಬಂಧ ಅಕ್ರಮ ಸಕ್ರಮ ಅಡಿಯಲ್ಲಿ ಮೂರುವರೆ ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದು, ಪರಿಶೀಲನಾ ಹಂತದಲ್ಲಿವೆ ಎಂದು ತಹಶೀಲ್ದಾರ್‌ ಹೆಚ್‌.ಟಿ ಮಂಜಪ್ಪ, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next