Advertisement

NIA: ಕರಾವಳಿ ಮೇಲೆ ಎನ್‌ಐಎ ನಿರಂತರ ಹದ್ದಿನ ಕಣ್ಣು !

09:36 AM Mar 07, 2024 | Team Udayavani |

ಮಂಗಳೂರು: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ ಐಎ ನಿರಂತರವೆಂಬಂತೆ ಕಣ್ಣಿಡುವಂತಾಗಿದೆ.

Advertisement

ನಾಲ್ಕೈದು ವರ್ಷಗಳಿಂದ ಹೊರ ರಾಜ್ಯಗಳಲ್ಲಿ ನಡೆದ ಭಯೋತ್ಪಾದನ ಕೃತ್ಯ, ಐಸಿಸ್‌ ನೆಟ್‌ವರ್ಕ್‌ಗೆ ಸಂಬಂಧಿಸಿ ಎನ್‌ಐಎ ಹಲವು ಬಾರಿ ದ.ಕ. ಜಿಲ್ಲೆಯಲ್ಲಿ ದಾಳಿ ನಡೆಸಿದೆ. ಇದುವರೆಗೂ 15ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದೆ. ಹಲವರ ವಿರುದ್ಧ ದೋಷಾರೋಪಣ ಪಟ್ಟಿ ಕೂಡ ಸಲ್ಲಿಕೆಯಾಗಿದೆ.

ಎನ್‌ಐಎ ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆಗೆ ಪುಷ್ಟಿ ನೀಡುವಂತೆ ಪದೇಪದೆ ಎನ್‌ಐಎ ದ.ಕ. ಜಿಲ್ಲೆಯಲ್ಲಿ ಶೋಧ ನಡೆಸುವ ಸ್ಥಿತಿ ಉಂಟಾಗುತ್ತಿದೆ. ಕೆಲವೊಮ್ಮೆ ಭಾರೀ ಪ್ರತಿರೋಧದ ನಡುವೆ ಪೊಲೀಸ್‌ ಭದ್ರತೆಯೊಂದಿಗೆ ಶೋಧ ಕೂಡ ನಡೆಸಿತ್ತು. ಬೆಂಗಳೂರು ಕೆಫೆಯಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೆ ಎನ್‌ಐಎ ಕಣ್ಣು ಕರಾವಳಿ ಮೇಲೆ ಬಿದ್ದಿದೆ. ಮಂಗಳವಾರ ದ.ಕ ಜಿಲ್ಲೆಯ ಎರಡು ಕಡೆ ಶೋಧ ನಡೆಸಿದೆ. ಮಂಗಳೂರಿನ ಅತ್ತಾವರದ ನಾವಿದ್‌ ಎಂಬಾತನ ಮನೆಯನ್ನೂ ಶೋಧಿಸಿದೆ.

 2021ರ ಆಗಸ್ಟ್‌ನಲ್ಲಿ ಉಳ್ಳಾಲದಲ್ಲಿ ಕಾರ್ಯಾಚರಣೆ ನಡೆಸಿದ್ದ ಎನ್‌ಐಎ ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಂಪರ್ಕ, ಸಂಘಟನೆಗೆ ಯುವಕರ ಸೇರ್ಪಡೆ ಆರೋಪದಲ್ಲಿ ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಅವರ ಮೊಮ್ಮಗ ಅಮರ್‌ ಅಬ್ದುಲ್‌ ರೆಹಮಾನ್‌ ನ್ನು ಬಂಧಿಸಿತ್ತು. ಅಲ್ಲದೆ ಕೆಲವು ದಿನಗಳ ಬಳಿಕ ಇನ್ನೋರ್ವ ಮೊಮ್ಮಗನ ಪತ್ನಿ ದೀಪ್ತಿ ಮಾರ್ಲ ಆಲಿಯಾಸ್‌ ಮರಿಯಂಳನ್ನು ವಶಕ್ಕೆ ಪಡೆದಿತ್ತು.

 2022ರ ಜುಲೈಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಬಿಹಾರದ ಕಾರ್ಯ ಕ್ರಮದಲ್ಲಿ ವಿಧ್ವಂಸಕ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ 2023ರ ಮೇ 31ರಂದು ಪುತ್ತೂರು, ಬಂಟ್ವಾಳ, ಸಜಿಪಮೂಡ, ಪುತ್ತೂರು, ಕಾಸರಗೋಡು ಕುಂಜತ್ತೂರು ಸೇರಿದಂತೆ 16 ಕಡೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿತ್ತು.

Advertisement

 2022ರ ಜುಲೈಯಲ್ಲಿ ನಡೆದಿದ್ದ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಮಂಗಳೂರು ಸಹಿತ 30ಕ್ಕೂ ಅಧಿಕ ಕಡೆಗಳಲ್ಲಿ ಶೋಧ ನಡೆಸಿ ಹಲವರನ್ನು ವಶಕ್ಕೆ ಪಡೆದಿತ್ತು.

2022ರ ನವೆಂಬರ್‌ನಲ್ಲಿ ಮಂಗಳೂರಿನ ಕಂಕನಾಡಿ ಬಳಿ ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ ಮತ್ತು ಶಿವಮೊಗ್ಗದ ಬಾಂಬ್‌ ಟ್ರಯಲ್‌ ಪ್ರಕರಣಕ್ಕೆ ಸಂಬಂಧಿಸಿ 2023ರ ಜನವರಿಯಲ್ಲಿ ಎನ್‌ಐಎ ತಂಡ ಮಂಗಳೂರು ನಗರದ ಹೊರವಲಯದ ಕಾಲೇಜಿನ ಮೇಲೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next