ಬಂಟ್ವಾಳ: ಬಿಹಾರದ ಪಾಟ್ನಾದಲ್ಲಿ ನಡೆದ ಪ್ರಧಾನಿ ಮೋದಿಯವರ ಕಾರ್ಯಕ್ರಮದಲ್ಲಿ ಬಾಂಬ್ ಇರಿಸಲು ಯತ್ನಿಸಿ ಬಂಧಿತರಾದ ಉಗ್ರರಿಗೆ ಹಣಕಾಸಿನ ನೆರವು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಎನ್‌ಐಎ ತಂಡ ರವಿವಾರ ಸಂಜೆ ನಂದಾವರದ ಕೆಲವು ಮನೆಗಳಿಗೆ ದಾಳಿ ನಡೆಸಿದೆ.
ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಇಕ್ಬಾಲ್, ಸರ್ಫಾಜ್ ನವಾಜ್ ಹಾಗೂ ನೌಫಲ್ ಮನೆಗೆ ದಾಳಿ ನಡೆದು ತೀವ್ರ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದ್ದು, ಜತೆಗೆ ಪಾಣೆಮಂಗಳೂರು ಹಾಗೂ ಮೆಲ್ಕಾರಿನ ಸೈಬರ್ ಕೆಫೆಗಳಿಗೂ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿದೆ.
ಪಾಟ್ನಾದಲ್ಲಿ ಬಾಂಬ್ ಇಡಲು ಯತ್ನಿಸಿದ್ದ ಉಗ್ರರನ್ನು ಬಂಧಿಸಲಾಗಿದ್ದು, ಅವರಿಗೆ ನಂದಾವರ ಈ ಆರೋಪಿಗಳು ಹಣಕಾಸಿನ ನೆರವು ಒದಗಿಸಿದ್ದಾರೆ. ಆದರೆ ಇವರಿಗೆ ಆ ಹಣ ಎಲ್ಲಿಂದ ಬಂದಿದೆ ಎಂದು ತಿಳಿದು ಬಂದಿಲ್ಲ.
ಆರೋಪಿಗಳು ಉಗ್ರರ ಹಲವು ಬ್ಯಾಂಕ್ ಖಾತೆಗಳಿಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಆತಂಕಕಾರಿ ವಿಚಾರ ತಿಳಿದು ಬಂದಿದ್ದು, ಖಚಿತಗೊಂಡಿಲ್ಲ. ರವಿವಾರ ಸಂಜೆಯ ವೇಳೆ ಏಕಾಏಕಿ ಹತ್ತಾರು ಪೊಲೀಸ್ ವಾಹನಗಳು ನಂದಾವರದತ್ತ ಆಗಮಿಸಿದಾಗ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಉಗ್ರರ ಜತೆ ನಂಟಿರುವ ವ್ಯಕ್ತಿಗಳು ತಮ್ಮೂರಿನಲ್ಲೇ ಇದ್ದಾರೆಯೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆ, ದಾಳಿಯ ಕುರಿತು ಇನ್ನಷ್ಟು ವಿವರಗಳು ತನಿಖೆಯ ಬಳಿಕವೇ ಹೊರಬರಬೇಕಿದೆ.
ಇದನ್ನೂ ಓದಿ: ಪೊಲೀಸ್ ಜೀಪು- ಬೈಕ್ ನಡುವೆ ಅಪಘಾತ: ಪಾಣಾಜೆ ಸಿಎ ಬ್ಯಾಂಕ್ ಸಿಇಒ ಸಾವು