Advertisement
ಭಾರತದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವುದಕ್ಕಾಗಿ ಮತ್ತು ಉಗ್ರ ಸಂಘಟನೆಗೆ ಯುವಕರನ್ನು ಸೇರ್ಪಡೆ ಮಾಡುವುದಕ್ಕಾಗಿ ಅಲ್ಕಾಯಿದಾ ಸಂಚು ರೂಪಿಸಿತ್ತು. ಈ ಸಂಚಿಗೆ ಸಂಬಂಧಿಸಿ ಕಳೆದ ವರ್ಷ ಪ್ರಕರಣ ದಾಖಲಿಸಿದ್ದ ಎನ್ಐಎ ನಿರಂತರವಾಗಿ ತನಿಖೆ ನಡೆಸುತ್ತಿದೆ. ಇದರ ಭಾಗವಾಗಿ ಸೋಮವಾರ ಕರ್ನಾಟಕ, ಜಮ್ಮು- ಕಾಶ್ಮೀರ, ಬಿಹಾರ, ಪಶ್ಚಿಮ ಬಂಗಾಲ, ತ್ರಿಪುರಾ ಮತ್ತು ಅಸ್ಸಾಂಗಳಲ್ಲಿ ದಾಳಿ ನಡೆದಿದೆ.
ದಾಳಿಯ ಸಮಯದಲ್ಲಿ ಬ್ಯಾಂಕ್ ವ್ಯವಹಾರಗಳ ಮಾಹಿತಿಯನ್ನು ಹೊಂದಿರುವ ದಾಖಲೆಗಳು, ಮೊಬೈಲ್ ಫೋನ್ಗಳು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಉಗ್ರ ಚಟುವಟಿಕೆಗೆ ಬಳಕೆಯಾಗುತ್ತಿದ್ದರ ಬಗ್ಗೆ ಮಾಹಿತಿಯನ್ನು ಒಳಗೊಂಡಿವೆ ಎಂದು ಎನ್ಐಎ ಪ್ರಕಟನೆ ತಿಳಿಸಿದೆ. ಎನ್ಐಎ ತನಿಖೆಯ ಪ್ರಕಾರ ದಾಳಿಗೊಳಗಾದ ಪ್ರದೇಶದಲ್ಲಿದ್ದ ವ್ಯಕ್ತಿಗಳು ಬಾಂಗ್ಲಾದೇಶದ ಪ್ರಜೆಗಳೊಂದಿಗೆ ಸಂಪರ್ಕ ಹೊಂದಿದ್ದರು. ಅಲ್ಲದೆ ಅಲ್ಕಾಯಿದಾ ಬಗ್ಗೆ ಸಹಾನುಭೂತಿ ಹೊಂದಿದ್ದರು. ಹೀಗಾಗಿ ಈ ಪ್ರದೇಶಗಳ ಮೇಲೆ ದಾಳಿ ಮಾಡಿ ಸಂಚಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆ ಮುಂದುವರಿಸಲಾಗುತ್ತದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಬಾಂಗ್ಲಾದೇಶ ಮೂಲದ ಅಲ್ಕಾಯಿದಾ ಕಾರ್ಯಕರ್ತರು ನಡೆಸಿದ ಪಿತೂರಿಗೆ ಸಂಬಂಧಿಸಿ 2023ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಎನ್ಐಎ ನಿರಂತರವಾಗಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಭಯೋತ್ಪಾದಕ ಚಟುವಟಿಕೆಯ ಪ್ರಚಾರ, ಉಗ್ರ ಸಂಘಟನೆಗಳಿಗೆ ಜನರನ್ನು ಸೆಳೆಯುವುದು ಮುಂತಾದ ಅಕ್ರಮ ಚಟುವಟಿಕೆ ನಡೆಸುತ್ತಿರುವ ಆರೋಪವನ್ನು ಈ ಸಂಘಟನೆಯ ಮೇಲೆ ಎನ್ಐಎ ಮಾಡಿದೆ.
Advertisement
ಇದೇ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ನವೆಂಬರ್ನಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳ ಸಹಿತ ಐವರ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿತ್ತು. ಇವರೆಲ್ಲರೂ ದುರ್ಬಲ ಮುಸ್ಲಿಂ ಯುವಕರ ಮನಸ್ಸನ್ನು ಬದಲಾಯಿಸಿ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದ ಹಾಗೂ ಉಗ್ರ ಸಂಘಟನೆಗೆ ಹಣಕಾಸಿನ ನೆರವನ್ನು ಒದಗಿಸುತ್ತಿರುವ ಆರೋಪವನ್ನು ಹೊತ್ತಿದ್ದಾರೆ.