ನವದೆಹಲಿ:ಭಯೋತ್ಪಾದಕ ಸಂಘಟನೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಬುಧವಾರ(ಅಕ್ಟೋಬರ್ 13) ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ ಐಎ) 16 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:2023 ರ ಚುನಾವಣೆಗೆ ಇಡೀ ರಾಜ್ಯ ಸುತ್ತುತ್ತೇನೆ: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ
ಭಯೋತ್ಪಾದನಾ ಸಂಚು ಪ್ರಕರಣದ ಆರೋಪದಡಿ ಎನ್ ಐಎ, ವಾಸೀಮ್ ಅಹ್ಮದ್ ಸೋಫಿ, ತಾರಿಖ್ ಅಹ್ಮದ್ ದಾರ್, ಬಿಲಾಲ್ ಅಹ್ಮದ್ ಮೀರ್ ಅಲಿಯಾಸ್ ಬಿಲಾಲ್ ಫುಫು ಹಾಗೂ ತಾರಿಖ್ ಅಹ್ಮದ್ ಬಫಂಡಾ ಸೇರಿದಂತೆ ನಾಲ್ವರನ್ನು ಬಂಧಿಸಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಭಯೋತ್ಪಾದಕ ಸಂಘಟನೆಗಳ ಸಹಚರರಾಗಿದ್ದು, ಇವರು ವಿವಿಧ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರಿಗೆ ಸರಕು, ಸ್ಫೋಟಕ ಸಾಗಣೆ ಸೇರಿದಂತೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದರು ಎಂದು ಎನ್ ಐಎ ತಿಳಿಸಿದೆ.
ಎನ್ ಐಎ ಅಧಿಕಾರಿಗಳು ಜಮ್ಮು-ಕಾಶ್ಮೀರದ ಶ್ರೀನಗರ, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ. ಲಷ್ಕರ್ ಎ ತೊಯ್ಬಾ, ಜೈಶ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್, ಅಲ್ ಬದರ್ ನಂತಹ ಭಯೋತ್ಪಾದಕ ಸಂಘಟನೆಗಳು ನವದೆಹಲಿ ಸೇರಿದಂತೆ ಜಮ್ಮು-ಕಾಶ್ಮೀರದಲ್ಲಿ ದಾಳಿ ನಡೆಸುವ ಸಂಚು ನಡೆಸುತ್ತಿವೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಎನ್ ಐಎ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.