ಉಳ್ಳಾಲ: ಕೈರಂಗಳ ಗ್ರಾಮದ ನಡುಪದವಿನ ಸಮೀಪದ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಗುರುವಾರ ದಾಳಿ ನಡೆಸಿದ ಎನ್ ಐಎ ತಂಡ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದೆ.
ಏಳು ಮಂದಿ ಅಧಿಕಾರಿಗಳ ಎನ್ ಐಎ ತಂಡ ಮಂಗಳೂರಿನಲ್ಲಿ ಉಗ್ರವಾದದ ಪರ ಗೋಡೆ ಬರಹಕ್ಕೆ ಸಂಬಂಧಿಸಿದ ಆರೋಪಿ ಶಿವಮೊಗ್ಗದಿಂದ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಜತೆಗೆ ನಿರಂತರ ಸಂಪರ್ಕ ಹೊಂದಿದ್ದ ಕೈರಂಗಳ ಗ್ರಾಮದ ನಡುವಿನ ಖಾಸಗಿ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ಉಡುಪಿ ಮೂಲದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡಿದ್ದು,ಈತ ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಸ್ಪೋಟಕವನ್ನು ಸ್ಪೋಟಿಸುತ್ತಿದ್ದ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಮಾಝ್ ಮುನೀರ್ ಎಂಬಾತನ ಜೊತೆಗೆ ನಿರಂತರ ಸಂಪರ್ಕ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಜತೆಯಾಗಿ ಭಾಗಿಯಾಗಿದ್ದ ಎಂಬ ವಿಚಾರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಪ್ರಕರಣದಲ್ಲಿ ಸೈಯದ್ ಯಾಸೀನ್ ಬಂಧನದ ಬಳಿಕ ಮಾಝ್ ಮುನೀರ್ ನನ್ನು ಬಂಧಿಸಿದ್ದು, ಇವರ ಸಹವರ್ತಿಯಾಗಿದ್ದ ಮಂಗಳೂರಿನ ಉಗ್ರ ಪರ ಗೋಡೆ ಬರಹ ಬರೆದಿದ್ದ ಶಾರಿಕ್ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಕುಕ್ಕರ್ ಬಾಂಬ್ ಸ್ಪೋಟದಿಂದ ಗಾಯಾಳು ಅಗಿ ಎನ್ ಐಎ ವಶದಲ್ಲಿದ್ದಾನೆ.
ಯಾಸಿನ್ ಶಿವಮೊಗ್ಗದಲ್ಲಿ ಎಂಜಿನಿಯರಿಂಗ್ ಓದಿದ್ದರೆ, ಮುನೀರ್ ಕೈರಂಗಳ ಗ್ರಾಮದ ನಡುಪದವಿನ ಖಾಸಗಿ ಕಾಲೇಜಿನಲ್ಲಿಎಂ ಟೆಕ್ ಪದವಿ ವಿದ್ಯಾರ್ಥಿಯಾಗಿದ್ದ. ತೀರ್ಥಹಳ್ಳಿ ಮೂಲದ ಮಹ್ಮದ್ ಶಾರೀಕ್ ಮಹ್ಮದ್ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಗುರುವಾರ ವಶಕ್ಕೆ ಪಡೆದಿರುವ ಉಡುಪಿ ಮೂಲದ ವಿದ್ಯಾರ್ಥಿ ಮುನೀರ್ ಸಂಪರ್ಕದಲ್ಲಿದ್ದು, ಅವನೊಂದಿಗೆ ಕೆಲವು ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಿರುವ ಸಾಧ್ಯತೆಯ ಮೇರೆಗೆ ವಶಕ್ಕೆ ಪಡೆದಿದ್ದು,ಹೆಚ್ಚಿನ ತನಿಖೆ ಬೆಂಗಳೂರಿನಲ್ಲಿನಡೆಯಲಿದೆ.