Advertisement

NIA ಭಾರೀ ಕಾರ್ಯಾಚರಣೆ; ISIS”ಬಳ್ಳಾರಿ ಮಾಡ್ಯೂಲ್‌”ಯೋಜನೆ ವಿಫಲ:8 ಏಜೆಂಟ್‌ಗಳು ಅರೆಸ್ಟ್

06:24 PM Dec 18, 2023 | Team Udayavani |

ಹೊಸದಿಲ್ಲಿ: ಐಸಿಸ್ ವಿರುದ್ಧ ಸೋಮವಾರ (ಡಿ.18) ಬೆಳಗ್ಗೆ ಕಾರ್ಯಾಚರಣೆಗಿಳಿದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೋಮವಾರ ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ದಾಳಿ ನಡೆಸಿ ನಿಷೇಧಿತ ಉಗ್ರ ಸಂಘಟನೆಯ ಬಳ್ಳಾರಿ ಘಟಕದ ಎಂಟು ಏಜೆಂಟ್‌ಗಳನ್ನು ಬಂಧಿಸಿದೆ. ಉಗ್ರ ತಂಡದ ನಾಯಕ ಮಿನಾಜ್ ಸೇರಿ ಇತರ ಆರೋಪಿಗಳ ಭಯೋತ್ಪಾದಕ ಕೃತ್ಯಗಳನ್ನೆಸಗುವ, ವಿಶೇಷವಾಗಿ IED ಸ್ಫೋಟಗಳನ್ನು ನಡೆಸುವ ಯೋಜನೆಗಳನ್ನು ವಿಫಲಗೊಳಿಸಿದೆ.

Advertisement

ಬಂಧಿತರು ಕರ್ನಾಟಕದ ಬಳ್ಳಾರಿಯ ಮಿನಾಜ್ ಅಲಿಯಾಸ್ ಮೊಹಮದ್ ಸುಲೇಮಾನ್, ಸೈಯದ್ ಸಮೀರ್ , ಬೆಂಗಳೂರಿನ ಮೊಹಮದ್ ಮುಜಮ್ಮಿಲ್, ದೆಹಲಿಯ ಶಯಾನ್ ರಹಮಾನ್, ಮುಂಬೈನಿಂದ ಅನಾಸ್ ಇಕ್ಬಾಲ್ ಶೇಖ್, ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ ಅಲಿಯಾಸ್ ಸಮಿ, ಜಮ್ಶೆಡ್‌ಪುರದ ಎಂಡಿ ಶಹಬಾಜ್ ಅಲಿಯಾಸ್ ಜುಲ್ಫಿಕರ್(ಗುಡ್ಡು) ಎಂಬವರನ್ನು ಬಂಧಿಸಲಾಗಿದೆ.

NIA ತಂಡಗಳು ಬಳ್ಳಾರಿ, ಬೆಂಗಳೂರು, ಮಹಾರಾಷ್ಟ್ರದ ಅಮರಾವತಿ, ಮುಂಬೈ ಮತ್ತು ಪುಣೆ, ಜಾರ್ಖಂಡ್‌ನ ಜಮ್ಶೆಡ್‌ಪುರ ಮತ್ತು ಬೊಕಾರೊ, ದೆಹಲಿಯಾದ್ಯಂತ ಹರಡಿಕೊಂಡಿದ್ದ 19 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದವು.

ಎಂಟು ಐಸಿಸ್ ಏಜೆಂಟ್‌ಗಳು ಉಗ್ರ ಸಂಬಂಧಿತ ಕೃತ್ಯಗಳು ಮತ್ತು ನಿಷೇಧಿತ ಸಂಘಟನೆಯಾದ ಐಸಿಸ್‌ನ ಚಟುವಟಿಕೆಗಳನ್ನು ಸಕ್ರಿಯವಾಗಿ ಉತ್ತೇಜಿಸುವಲ್ಲಿ ಮಿನಾಜ್ ನೇತೃತ್ವದಲ್ಲಿ ತೊಡಗಿಸಿಕೊಂಡಿದ್ದರು.

ದಾಳಿ ವೇಳೆ ಸ್ಫೋಟಕ ಕಚ್ಚಾ ಸಾಮಗ್ರಿಗಳಾದ ಸಲ್ಫರ್, ಪೊಟ್ಯಾಸಿಯಮ್ ನೈಟ್ರೇಟ್, ಇದ್ದಿಲು, ಗನ್ ಪೌಡರ್, ಎಥೆನಾಲ್, ಹರಿತವಾದ ಆಯುಧಗಳು, ಲೆಕ್ಕವಿಲ್ಲದ ನಗದು ಮತ್ತು ದೋಷಾರೋಪಣೆಯ ದಾಖಲೆಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಆರಂಭಿಕ ತನಿಖೆಯ ಪ್ರಕಾರ, ಆರೋಪಿಗಳು ಸ್ಫೋಟಕ ಕಚ್ಚಾ ವಸ್ತುಗಳನ್ನು ಐಇಡಿ ತಯಾರಿಸಿ ಅದನ್ನು ಸ್ಫೋಟ ನಡೆಸಲು ಸಂಚು ಹೂಡಿದ್ದರು. ಹಿಂಸಾತ್ಮಕ ಜಿಹಾದ್, ಖಿಲಾಫತ್, ಐಸಿಸ್ ಇತ್ಯಾದಿಗಳ ಮಾರ್ಗವನ್ನು ಅನುಸರಿಸಿ ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಮೂಲಕ ನಿರಂತರವಾಗಿ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ತನಿಖೆಯಿಂದ ಬಹಿರಂಗವಾಗಿವೆ. ನಿರ್ದಿಷ್ಟವಾಗಿ ನೇಮಕಾತಿ ಉದ್ದೇಶಗಳಿಗಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಹಾದ್ ಉದ್ದೇಶಕ್ಕಾಗಿ ಮುಜಾಹಿದೀನ್‌ಗಳ ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಪ್ರಸಾರ ಮಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next