ಮುಂಬಯಿ : ಮಧ್ಯಪದ್ರದೇಶದ ಭೋಪಾಲ್ ನಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಮಾಲೆಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಅವರ ಸ್ಪರ್ಧೆಗೆ ತಡೆ ನೀಡಲು ಎನ್.ಐ.ಎ. ನ್ಯಾಯಾಲಯ ನಿರಾಕರಿಸಿದೆ.
ಪ್ರಗ್ಯಾ ಸಿಂಗ್ ಅವರ ಉಮೇದುವಾರಿಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲವು ತಿರಸ್ಕರಿಸಿದೆ ಮತ್ತು ಈ ವಿಚಾರದಲ್ಲಿ ಪ್ರಗ್ಯಾ ಸಿಂಗ್ ಅವರನ್ನು ತಡೆಯಲು ತನಗೆ ಅಧಿಕಾರ ಇಲ್ಲವೆಂದು ವಿಶೇಷ ನ್ಯಾಯಾಲವು ಹೇಳಿದೆ.
ನ್ಯಾಯಾಲಯದ ಈ ನಿರ್ಧಾರದಿಂದಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಗ್ಯಾ ಸಿಂಗ್ ಅವರಿಗಿದ್ದ ಅಡ್ಡಿಯೊಂದು ನಿವಾರಣೆಯಾದಂತಾಗಿದೆ. 2008ರ ಮಾಲೆಗಾಂವ್ ಬಾಂಬ್ ಸ್ಪೋಟದಲ್ಲಿ ತನ್ನ ಮಗನನ್ನು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಸಾಧ್ವಿ ಪ್ರಗ್ಯಾ ಸಿಂಗ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಬೇಕು ಎಂದು ಮುಂಬಯಿಯಲ್ಲಿರುವ ಎನ್.ಐ.ಎ. ವಿಶೇಷ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಿದ್ದರು.
ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಯಾರನ್ನೂ ತಡೆಯುವ ಅಧಿಕಾರ ತನಗಿಲ್ಲ ಎಂದು ವಿಶೇಷ ನ್ಯಾಯಾಲವು ಘೋಷಿಸಿತು ಮತ್ತು ಈ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುವುದು ಚುನಾವಣಾ ಅಧಿಕಾರಿಗಳ ಕೆಲಸವೇ ಹೊರತು ನಮ್ಮದಲ್ಲ ಎಂದು ನ್ಯಾಯಾಲವು ಅಭಿಪ್ರಾಯಪಟ್ಟಿತು. ಮತ್ತು ಈ ವಿಚಾರವನ್ನು ಚುನಾವಣಾ ಆಯೋಗವೇ ನೋಡಿಕೊಳ್ಳಲಿ ಎಂದು ಎನ್.ಐ.ಎ. ನ್ಯಾಯಾಲವು ಹೇಳಿದೆ.