Advertisement

Rameshwaram Cafe; NIA ತನಿಖೆಯ ವೇಗ ತೀವ್ರ: ಚೆನ್ನೈ ಸೇರಿ ವಿವಿಧೆಡೆ ಶೋಧ

10:35 AM Mar 27, 2024 | Team Udayavani |

ಶಿವಮೊಗ್ಗ : ಬೆಂಗಳೂರಿನಲ್ಲಿ ನಡೆದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಬೆಳ್ಳಂಬೆಳಗ್ಗೆ ಚೆನ್ನೈ, ಬೆಂಗಳೂರು, ತೀರ್ಥಹಳ್ಳಿ ಸೇರಿ ವಿವಿಧೆಡೆ ಎನ್ ಐಎ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ ತನಿಖೆಯ ವೇಗ ತೀವ್ರ ಗೊಳಿಸಿದೆ.

Advertisement

ಮೂಲಗಳ ಪ್ರಕಾರ ಬುಧವಾರ ಬೆಳಗ್ಗೆ ಚೆನ್ನೈನ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಮಾರ್ಚ್ 1 ರಂದು ನಡೆದ ಸ್ಫೋಟದ ಇಬ್ಬರು ಶಂಕಿತರು ಚೆನ್ನೈನಲ್ಲಿ ತಂಗಿದ್ದಾರೆ ಎಂಬ ಗುಪ್ತಚರ ಮಾಹಿತಿಯ ನಂತರ ಕಾರ್ಯಾಚರಣೆ ನಡೆಸಲಾಗಿದೆ.

ಈಗಾಗಲೇ ಪ್ರಮುಖ ಶಂಕಿತನನ್ನು ಗುರುತಿಸಿರುವ ಕೇಂದ್ರೀಯ ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆ ಇನ್ನೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ. ಟೋಪಿ ಮತ್ತು ಮಾಸ್ಕ್ ಧರಿಸಿದ ವ್ಯಕ್ತಿ ಜನನಿಭಿಡ ಕಫೆಯಲ್ಲಿ ನಡೆಸಿದ ಕಡಿಮೆ ತೀವ್ರತೆಯ ಬಾಂಬ್ ಸ್ಪೋಟದಲ್ಲಿ ಕನಿಷ್ಠ ಹತ್ತು ಮಂದಿ ಗಾಯಗೊಂಡಿದ್ದರು.

ತೀರ್ಥಹಳ್ಳಿ ಮೂಲದ ಪ್ರಮುಖ ಶಂಕಿತ ಮುಸ್ಸಾವಿರ್ ಹುಸೇನ್ ಶಾಜಿಬ್ ಅನ್ನು ಮಾರ್ಚ್ 23 ರಂದು ಗುರುತಿಸಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಪ್ರಮುಖ ಆರೋಪಿಯನ್ನು ಗುರುತಿಸಲು ಸಂಸ್ಥೆಯು 1,000 ಸಿಸಿಟಿವಿ ಕೆಮರಾಗಳನ್ನು ಪರಿಶೀಲನೆ ನಡೆಸಿದೆ. ಈ ಸ್ಫೋಟದ ಹಿಂದೆ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಕೈವಾಡವಿರಬಹುದು ಎಂದು ತನಿಖಾ ಸಂಸ್ಥೆಯ ಮೂಲಗಳು ಈ ಹಿಂದೆ ಹೇಳಿದ್ದವು.

ಬಾಂಬ್ ದಾಳಿಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ನಗದು ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದ್ದು, ಶಂಕಿತನ ಸಿಸಿಟಿವಿ ಚಿತ್ರಗಳು ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next