ಮಧುರೈ: ತಮಿಳುನಾಡಿನಲ್ಲಿ ಬಂಧಿತರಾಗಿರುವ ಇಬ್ಬರು ವ್ಯಕ್ತಿಗಳು ಉಗ್ರ ಸಂಘಟನೆ ಐಸಿಸ್ ಜತೆಗೆ ಶಾಮೀಲಾಗಿದ್ದಾರೆ. ಜತೆಗೆ, ಕೇಂದ್ರ ಸರ್ಕಾರವನ್ನು ಪತನಗೊಳಿಸಿ, ಹಿಜ್ಬ್-ಉತ್-ತಾಹಿರ್ ಉಗ್ರ ಸಂಘಟನೆಯ ಸಂಸ್ಥಾಪಕ ತಾಕಿ ಅಲ್ ದಿನ್ ಅಲ್ ನಭಾನಿ ಸಿದ್ಧಪಡಿಸಿದ ಸಂವಿಧಾನ ಜಾರಿಗೊಳಿಸಲು ಪ್ರಯತ್ನ ಮಾಡಿದ್ದರು ಎಂದು ಎನ್‌ಐಎ ಚೆನ್ನೈನಲ್ಲಿರುವ ವಿಶೇಷ ಕೋರ್ಟ್‌ಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
ಬಾವಾ ಬಹ್ರುದ್ದೀನ್ ಅಲಿಯಾಸ್ ಮನ್ನೈ ಬಾವಾ ಮತ್ತು ಝಿಯಾವುದ್ದೀನ್ ಬಕಾವಿ ಎಂಬವರು ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಕೇಸು ಇದಾಗಿದೆ. ಆರಂಭದಲ್ಲಿ ಮಧುರೈ ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದ ಪ್ರಕರಣವನ್ನು 2021ರ ಡಿಸೆಂಬರ್‌ನಲ್ಲಿ ಎನ್‌ಐಎಗೆ ವರ್ಗಾಯಿಸಲಾಗಿತ್ತು.
ಇದನ್ನೂ ಓದಿ:ಮೀಡಿಯಾ ಒನ್ ಚಾನೆಲ್ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ
ಉಗ್ರ ಸಂಘಟನೆ ಐಸಿಸ್‌ಗೆ ಸೇರ್ಪಡೆಗೊಳ್ಳಲು ಅವರು ಯುವಕರಿಗೆ ಕುಮ್ಮಕ್ಕು ನೀಡುತ್ತಿದ್ದರು. ಅದಕ್ಕಾಗಿ ಅವರು ರಹಸ್ಯವಾಗಿ ಋಣಾತ್ಮಕವಾಗಿ ಮನಃಪರಿವರ್ತನೆಗಾಗಿ ತರಬೇತಿ ನೀಡುತ್ತಿದ್ದರು. ಕೇಂದ್ರ ಸರ್ಕಾರವನ್ನು ಪತನಗೊಳಿಸಿ, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸರ್ಕಾರ ಸ್ಥಾಪಿಸಲು ಅವರು ಸಂಚು ರೂಪಿಸಿದ್ದರು ಎಂದು ತನಿಖಾ ಸಂಸ್ಥೆ ಆರೋಪಿಸಿದೆ.
ಫೇಸ್‌ಬುಕ್ ಮತ್ತು ಯೂಟ್ಯೂಬ್ ಮೂಲಕ ಹಿಜ್ಬ್-ಉತ್-ತಾಹಿರ್ ಸಂಘಟನೆಯ ತತ್ವಗಳನ್ನು ಪ್ರಚಾರ ಮಾಡಲೂ ಉದ್ದೇಶಿಸಿದ್ದರು ಎಂದು ಉಲ್ಲೇಖಿಸಲಾಗಿದೆ.