Advertisement

ನಕ್ಸಲರ ವಿರುದ್ಧ ಮಲೆನಾಡಿನಲ್ಲಿ ಎನ್‌ಐಎ ದಾಳಿ

02:44 PM Oct 14, 2021 | Team Udayavani |

ಶಿವಮೊಗ್ಗ: ದಕ್ಷಿಣ ಭಾರತದ ಮೂರು ರಾಜ್ಯಗಳ 20ಕ್ಕೂ ಹೆಚ್ಚು ಕಡೆ ಹಾಗೂ ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

Advertisement

ಶೃಂಗೇರಿ, ಕಾರ್ಕಳಕ್ಕೆ ಹೊಂದಿಕೊಂಡಂತಿರುವ ಶಿವಮೊಗ್ಗದ ಕೆಲವು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ನಕ್ಸಲ್‌ ಚಳವಳಿ ಸಂಬಂಧ ತನಿಖೆ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿಯ ವಿವಿಧ ಕಡೆಯಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ದಾಳಿ ಮಾಡಿದ್ದಾರೆ. ತಮಿಳುನಾಡಿನ ಕೊಯಮತ್ತೂರು, ಥೇಣಿ, ರಾಮನಾಥಪುರಂ, ಸೇಲಂ, ಕನ್ಯಾಕುಮಾರಿ, ಕೃಷ್ಣಗಿರಿ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಇನ್ನು, ಕೇರಳದ ವಯನಾಡ್‌, ತ್ರಿಶೂರ್‌ ಮತ್ತು ಕಣ್ಣೂರು ಜಿಲ್ಲೆಗಳಲ್ಲೂ ಪರಿಶೀಲಿಸಿದ್ದಾರೆ. ನಕ್ಸಲ್‌ (ಸಿಪಿಐ ಮಾವೋವಾದಿ) ಚಳವಳಿಗೆ ಶಕ್ತಿ ತುಂಬಲು 2016ರ ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ತರಬೇತಿ ಕ್ಯಾಂಪ್‌ ನಡೆಸಲು ನಿರ್ಧರಿಸಲಾಗಿತ್ತು. ಕೇರಳ ರಾಜ್ಯದ ಮಲ್ಲಾಪುರಂ ಜಿಲ್ಲೆಯ ಎಡಕ್ಕರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತರಬೇತಿ ಶಿಬಿರ ಸ್ಥಳ ಗುರುತಿಸಲಾಗಿತ್ತು. ಶಿಬಿರದಲ್ಲಿ ಧ್ವಜಾರೋಹಣ ನೆರವೇರಿಸಿ, ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಲು ಚಿಂತಿಸಲಾಗಿತ್ತು. ಈ ಸಂಬಂಧ 2017ರಲ್ಲಿ ಕೇರಳದ ಎಡಕ್ಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿತ್ತು.

Advertisement

ಪ್ರಕರಣದ ತನಿಖೆ ವಹಿಸಿಕೊಂಡ ಎನ್‌ಐಎ ಅಧಿಕಾರಿಗಳು ಮರು ಎಫ್‌ ಐಆರ್‌ ದಾಖಲು ಮಾಡಿಕೊಂಡರು. ಪ್ರಕರಣದಲ್ಲಿ ಇನ್ನೂ 20 ಮಂದಿ ಇರುವುದು ಬೆಳಕಿಗೆ ಬಂದಿತ್ತು. ಕರ್ನಾಟಕ ನಕ್ಸಲ್‌ ಚಳವಳಿಯ ಮುಂಚೂಣಿ ನಾಯಕರಾದ ಬಿ.ಜಿ.ಕೃಷ್ಣಮೂರ್ತಿ, ವಿಕ್ರಂ ಗೌಡ ಹೆಸರುಗಳು ಈ ಪಟ್ಟಿಯಲ್ಲಿತ್ತು. ಹಾಗಾಗಿ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದ ಎನ್‌ಐಎ ಅಧಿಕಾರಿಗಳು, ಹೊಸನಗರದ ಕೆಲವು ಕಡೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next