ಹೊಸದಿಲ್ಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಯ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವು ಮಂಗಳವಾರ ತಮಿಳುನಾಡಿನ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದೆ.
ಎನ್‌ಐಎ ಅಧಿಕಾರಿಗಳು ಚೆನ್ನೈ, ಮಧುರೈ, ದಿಂಡಿಗಲ್ ಮತ್ತು ಥೇಣಿ ಜಿಲ್ಲೆಗಳಲ್ಲಿ ಶೋಧ ಕೈಗೊಂಡರು. ಇದರಿಂದ ಈ ಕ್ರಿಮಿನಲ್ ಸಂಚಿನ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 15ಕ್ಕೆ ಏರಿದಂತಾ ಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಚೆನ್ನೈಯ ಅಬ್ದುಲ್ ರಜಾಕ್, ಮಧುರೈಯ ವಕೀಲರಾದ ಮೊಹಮ್ಮದ್ ಯೂಸುಫ್ ಮತ್ತು ಮೊಹಮ್ಮದ್ ಅಬ್ಟಾಸ್, ದಿಂಡಿಗಲ್‌ನ ಕೈಜರ್ ಮತ್ತು ಥೇಣಿಯ ಸತಿಕ್ ಆಲಿ ಬಂಧಿತ ವ್ಯಕ್ತಿಗಳು.
ಬಂಧಿತರ ಮನೆ ಮತ್ತು ಫಾರ್ಮ್ ಹೌಸ್‌ಗಳಲ್ಲಿ ಶೋಧ ನಡೆಸಿದ ವೇಳೆ ಕಾನೂನುಬಾಹಿರ ಸಾಹಿತ್ಯ, ಹರಿತವಾದ ಆಯುಧಗಳು, ಡಿಜಿಟಲ್ ಉಪಕರಣಗಳು ಮತ್ತು ದಾಖಲೆಗಳು ಲಭಿಸಿವೆ.
ಪಿಎಫ್ಐಯ ಸಿದ್ಧಾಂತವನ್ನು ಒಪ್ಪದ, 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾರ್ಪಡಿಸುವ ಅದರ ಯೋಜನೆಯನ್ನು ವಿರೋಧಿಸುವವರನ್ನು ಹತ್ಯೆಗೈಯುವ ಸಂಚನ್ನು ಬಂಧಿತರು ಹೊಂದಿದ್ದರು ಎಂಬುದು ತನಿಖೆಯ ವೇಳೆ ಬಹಿರಂಗವಾಗಿತ್ತು.