ಶಿವಮೊಗ್ಗ: ಐಸಿಸ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಉಗ್ರರನ್ನು ಮಂಗಳವಾರ ಬಂಧಿಸಿರುವುದಾಗಿ ಎನ್‌ಐಎ ತಿಳಿಸಿದೆ.
ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ಆರೋಪಿಗಳು ರೂಪಿಸಿದ ಪಿತೂರಿಗೆ ಸಂಬಂಧಿಸಿ ಎನ್‌ಐಎ ಈ ಇಬ್ಬರು ಐಸಿಸ್ ಕಾರ್ಯಕರ್ತರನ್ನು ಬಂಧಿಸಿದೆ.
ಬಂಧಿತ ಆರೋಪಿಗಳು ಮಂಗಳೂರಿನ ತೊಕ್ಕೊಟ್ಟು, ಪೆರ್ಮನ್ನೂರಿನ ಮಝಿನ್ ಅಬ್ದುಲ್ ರೆಹಮಾನ್ ಮತ್ತು ದಾವಣಗೆರೆಯ ಹೊನ್ನಾಳಿಯ ನೂರಾನಿ ಮಸೀದಿ ಹತ್ತಿರದ ದೇವನಾಯಕನಹಳ್ಳಿ ನಿವಾಸಿ ನದೀಮ್ ಅಹ್ಮದ್ ಕೆ.ಎ. ಎಂದು ತಿಳಿದು ಬಂದಿದೆ.
ಈ ಪ್ರಕರಣವನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 19, 2022 ರಂದು ಎಫ್‌ಐಆರ್ ದಾಖಲಿಸಲಾಗಿತ್ತು ಮತ್ತು ನವೆಂಬರ್ 11, 2022 ರಂದು ಎನ್‌ಐಎಯಿಂದ ಮರು ದಾಖಲಿಸಲಾಗಿತ್ತು.
ಮಾಜ್ ಮುನೀರ್, ಮಝಿನ್ ಅಬ್ದುಲ್ ರೆಹಮಾನ್ ನನ್ನು ನೇಮಕ ಮಾಡಿಕೊಂಡಿದ್ದು, ಸೈಯದ್ ಯಾಸಿನ್ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ನದೀಮ್ ಕೆ ಎ ನನ್ನು ನೇಮಕ ಮಾಡಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು ಇಸ್ಲಾಮಿಕ್ ಸ್ಟೇಟ್‌ನ ಚಟುವಟಿಕೆಗಳನ್ನು ಮುಂದುವರಿಸಲು ದೊಡ್ಡ ಪಿತೂರಿಯ ಭಾಗವಾಗಿ ವಿಧ್ವಂಸಕ ಕೃತ್ಯಗಳನ್ನು ಮಾಡಲು ಮುಂದಾಗಿದ್ದರು.ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿವೆ.