ಮಂಗಳೂರು: ಉಗ್ರಗಾಮಿ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಉಲ್ಲಾಳದ ಮಾಜಿ ಶಾಸಕ ದಿ ಬಿ.ಎಂ ಇದಿನಬ್ಬ ಅವರ ಮೊಮ್ಮಗನ ಪತ್ನಿ ಮರಿಯಂ ಅಲಿಯಾಸ್ ದೀಪ್ತಿ ಮಾರ್ಲಾ ರನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಸೋಮವಾರ ಬೆಳಗ್ಗೆ ಐಎನ್ ಎ ಅಧಿಕಾರಿಗಳು ಉಲ್ಲಾಳದ ನಿವಾಸಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ. ಮರಿಯಂ ಅಲಿಯಾಸ್ ದೀಪ್ತಿ ಮಾರ್ಲಾ ಮಾಜಿ ಶಾಸಕ ಇದಿನಬ್ಬ ಅವರ ಪುತ್ರ ಬಾಷಾ ಅವರ ಮಗ ಅನಾಸ್ ಅಬ್ದುಲ್ ರಹಮಾನ್ ರ ಪತ್ನಿಯಾಗಿದ್ದಾರೆ.
ಇದನ್ನೂ ಓದಿ:ರಾಮನಗರ ಜಿಲ್ಲೆ ಮಾಡಿದವನು ನಾನು.. ಅವರಿಬ್ಬರು ಅಲ್ಲಿ ಕಿತ್ತಾಡುತ್ತಿದ್ದಾರೆ: ಎಚ್ ಡಿಕೆ
ಕಳೆದ ವರ್ಷದ ಆಗಸ್ಟ್ 4ರಂದು ಐಎನ್ ಎ ಅಧಿಕಾರಿಗಳು ದಾಳಿ ನಡೆಸಿ ಅಮ್ಮರ್ ಅಬ್ದುಲ್ ರನ್ನು ಬಂಧಿಸಿದ್ದರು. ಈ ವೇಳೆ ಐಸಿಸ್ ಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಆ್ಯಪ್ ಗಳಲ್ಲಿ ಧನ ಸಂಚಯ, ಐಸಿಸ್ ಗೆ ಯುವಕರನ್ನು ಸೇರಿಸಲು ಪ್ರೇರೇಪಿಸುವ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿತ್ತು. ದಾಳಿಯ ವೇಳೆ ಲ್ಯಾಪ್ ಟಾಪ್ ಮೊಬೈಲ್ ಫೋನ್ ಹಾರ್ಡ್ ಡಿಸ್ಕ್. ಪೆನ್‌ಡ್ರೈವ್ ಮತ್ತು ಹಲವು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಐಸಿಸ್ ಸೇರಿದ್ದ ಬಿ.ಎಂ.ಬಾಷಾ ಕುಟುಂಬದ ಸದಸ್ಯೆ: ಇದಿನಬ್ಬ ಪುತ್ರ ಬಿ.ಎಂ. ಭಾಷಾ ಅವರ ಕುಟುಂಬದ ಸದಸ್ಯೆಯೊಬ್ಬರು ಈ ಹಿಂದೆಯೇ ಐಸಿಸ್ ಒಲವು ತೋರಿಸಿ ಸಿರಿಯಾಕ್ಕೆ ತೆರಳಿ ಬಳಿಕ ಅಫ್ಘಾನಿಸ್ಥಾನದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹತಗೊಂಡಿದ್ದಾರೆ. ಬಿ.ಎಂ. ಬಾಷಾ ಅವರ ಮೊಮ್ಮಗಳು (ಮಗಳ ಪುತ್ರಿ) ಅಜ್ಮಲಾಳನ್ನು ಕಾಸರಗೋಡಿನ ಪಡನ್ನದ ಎಂಬಿಎ ಪದವೀಧರ ಶಿಹಾಸ್ ಮದುವೆಯಾಗಿದ್ದು 2015ರ ಸುಮಾರಿಗೆ ಈ ಕುಟುಂಬ ಐಸಿಸ್‌ಗೆ ಒಲವು ತೋರಿಸಿ ಬಳಿಕ ಶ್ರೀಲಂಕಾ ಮಾರ್ಗವಾಗಿ ಮಸ್ಕತ್ ಬಳಿಕ ಕತಾರ್‌ಗೆ ತೆರಳಿ ಅಲ್ಲಿಂದ ಸಿರಿಯಾ ಸೇರಿದ್ದರು. ಶಿಹಾಸ್ ಸಹೋದರ ವೃತ್ತಿಯಲ್ಲಿ ವೈದ್ಯನಾಗಿದ್ದ ಡಾ| ಇಝಾಝ್ ಕೂಡ ಐಸಿಸ್‌ಗೆ ಸೇರಿದ್ದು ತನ್ನ ಪತ್ನಿಯೊಂದಿಗೆ ಸಿರಿಯಾ ತಲುಪಿದ್ದ. ಐಸಿಸ್‌ಗೆ ಸೇರಿದ್ದ ಈ ಸಹೋದರರೊಂದಿಗೆ ಅಜ್ಮಲಾ ವಿರುದ್ಧ ಎನ್‌ಐಎ 2016ರಲ್ಲಿ ಕೇರಳದಲ್ಲಿ ಎಫ್‌ಐಆರ್ ದಾಖಲು ಮಾಡಿದ್ದು, ಈ ಪ್ರಕರಣದಲ್ಲಿ ಅಜ್ಮಲಾ ಕೊನೆಯ 15ನೇ ಆರೋಪಿಯಾಗಿ ಆರೋಪ ಪಟ್ಟಿ ಹಾಕಲಾಗಿತ್ತು.
ಸಿರಿಯಾದಿಂದ ಅಫ್ಘಾನಿಸ್ಥಾನಕ್ಕೆ ಬಂದಿದ್ದ ಅಜ್ಮಲಾ ಕುಟುಂಬದ ಮೇಲೆ 2019ರ ವೇಳೆಗೆ ಅಮೆರಿಕ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಈ ಕುಟುಂಬ ಹತ್ಯೆಯಾಗಿರುವುದನ್ನು ಎನ್‌ಐಎ ದೃಢಪಡಿಸಿದೆ.