Advertisement

ರಾ.ಹೆ. 75 ಚತುಷ್ಪಥ ಕಾಮಗಾರಿ ಅರ್ಧದಲ್ಲೇ ಸ್ಥಗಿತ

09:51 PM Sep 07, 2020 | mahesh |

ಉಪ್ಪಿನಂಗಡಿ: ರಾ.ಹೆ. 75 ಚತುಷ್ಪಥ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿರುವುದರಿಂದ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೇಂದ್ರ ಸರಕಾರ ರಾ.ಹೆ. ಅಭಿವೃದ್ಧಿ ಪ್ರಾಧಿಕಾರದಡಿ ಮೂರೂವರೆ ವರ್ಷಗಳ ಹಿಂದೆ ಬಿ.ಸಿ. ರೋಡ್‌ನಿಂದ ಅಡ್ಡಹೊಳೆ ತನಕದ ಹೆದ್ದಾರಿ ಕಾಮಗಾರಿಯನ್ನು ಸಂಸ್ಥೆಯೊಂದಕ್ಕೆ ಗುತ್ತಿಗೆ ವಹಿಸಿತ್ತು. ಆದರೆ ಗುತ್ತಿಗೆದಾರರು ಎಲ್ಲೆಡೆ ಅಗೆದು ಹಾಕಿದ್ದು, ಅವಘಡಕ್ಕೆ ಕಾರಣವಾಗಿದೆ ಎಂದು ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಇತ್ತ ಪಟ್ಟಣದ ಹೃದಯ ಭಾಗದ ಹೆದ್ದಾರಿ ವಿಸ್ತರಣೆಗೆ ಅಗೆದಿರುವುದರಿಂದ ಚರಂಡಿಗಳು ಮುಚ್ಚಿ ಹೋಗಿ ನೀರು ನಿಂತು ಸಾಂಕ್ರಾಮಿಕ ರೋಗ ಭೀತಿ ಆವರಿಸಿದೆ. ಸ್ಥಳೀಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯವರು ಪ್ರಾಧಿಕಾರದ ವ್ಯವಸ್ಥಾಪಕ ಎಂಜಿನಿಯರ್‌ರನ್ನು ಸ್ಥಳಕ್ಕೆ ಕರೆಯಿಸಿ ವಾಸ್ತವಾಂಶವನ್ನು ಮನವರಿಕೆ ಮಾಡಿದರೂ ಭರವಸೆ ದೊರಕಿದೆ ಹೊರತು ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

Advertisement

ಕಲ್ಲಡ್ಕದಲ್ಲಿ ಮೇಲ್ಸೇತುವೆ
ಮೊದಲ ಹಂತದಲ್ಲಿ ಪೆರಿಯ ಶಾಂತಿಯಿಂದ ಬಿ.ಸಿ. ರೋಡ್‌ ತನಕ 49 ಕಿ. ಮೀ. ರಸ್ತೆ ಕಾಮಗಾರಿ ಆಗಲಿದೆ. ಈ ಮಧ್ಯೆ ಕಲ್ಲಡ್ಕ ಪೇಟೆಯಲ್ಲಿ ಎರಡೂವರೆ ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಆಗಲಿದೆ. ಉಳಿದಂತೆ ಉಪ್ಪಿನಂಗಡಿ, ನೆಲ್ಯಾಡಿ ಸಹಿತ 10 ಕಡೆಯಲ್ಲಿ ಸರ್ವೀಸ್‌ ರಸ್ತೆ, ಅಂಡರ್‌ ಪಾಸ್‌ ನಿರ್ಮಾಣ ಆಗಲಿದೆ.

2ನೇ ಹಂತದ ಕಾಮಗಾರಿ
2ನೇ ಹಂತದಲ್ಲಿ ಅಡ್ಡ ಹೊಳೆಯಿಂದ ಪೆರಿಯಶಾಂತಿ ತನಕ 15 ಕಿ. ಮೀ. ರಸ್ತೆ ಆಗಲಿದೆ. ಈ ಭಾಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ರಕ್ಷಿತಾ ರಣ್ಯ ಇದೆ. ಪೆರಿಯಶಾಂತಿ ಪ್ರದೇಶ ಕಾಡು ಪ್ರಾಣಿಗಳ ದಾಟು ಪ್ರದೇಶವಾಗಿದ್ದು, ಇದನ್ನು ವಿಶೇಷ ವಲಯವಾಗಿ ಗುರುತಿ ಸಲಾಗಿದೆ. ಇಲ್ಲಿ ಪ್ರಾಣಿಗಳ ದಾಟು ಸೇತುವೆ ನಿರ್ಮಾಣ ಆಗಲಿದೆ. ಈ ಎರಡನೇ ಹಂತದ ಕಾಮಗಾರಿಗೆ ಸುಮಾರು 400 ಕೋ. ರೂ. ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಪೆರಿಯಶಾಂತಿ ಎಂಬಲ್ಲಿ ಆನೆಪಥ ಪ್ರದೇಶವೆಂದು ಅರಣ್ಯ ಇಲಾಖೆ ಪ್ರಕಟಿಸಿದ್ದರೂ ಕಾಡು ಪ್ರಾಣಿಗಳ ಸಂಚಾರವಿದೆ ಎಂಬ ಅಕ್ಷೇಪದಿಂದ ಕಾಮಗಾರಿ ನಿಲುಗಡೆಗೆ ಕಾರಣವಾಗಿತ್ತು. ಒಟ್ಟಿನಲ್ಲಿ ಹೆದ್ದಾರಿ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಜನಪ್ರತಿನಿಧಿಗಳು ಎಚ್ಚೆತ್ತು ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಪ್ರಯತ್ನ ನಡೆಸಬೇಕಾಗಿದೆ.

ಸರಕಾರದ ಮಟ್ಟದಲ್ಲಿ ಮಂಜೂರಾತಿ ಆಗಬೇಕು
ಚತುಷ್ಪಥ ಹೆದ್ದಾರಿ ಕಾಮಗಾರಿ ಅರ್ಧದಲ್ಲೆ ಸ್ಥಗಿತಗೊಂಡಿರುವುದರಿಂದ ಹಲವು ಸಮಸ್ಯೆಗಳು ಉಂಟಾಗಿರುವುದು ಮನವರಿಕೆಯಾಗಿದೆ. ರಸ್ತೆ ಹೊಂಡಗಳಿಂದ ಕೂಡಿದ್ದು, ರಿಪೇರಿ ಕಾಮಗಾರಿಯನ್ನು ಸರಕಾರದ ಮಟ್ಟದಲ್ಲಿ ಮಂಜೂರಾತಿ ಪಡೆದು ನಿಯಮಾನುಸಾರ ನಡೆಸಬೇಕಾಗಿದೆ.
-ರಮೇಶ್‌ ಬಾಬು,  ವ್ಯವಸ್ಥಾಪಕ ಎಂಜಿನಿಯರ್‌, ಹೆದ್ದಾರಿ ಪ್ರಾಧಿಕಾರ

Advertisement

Udayavani is now on Telegram. Click here to join our channel and stay updated with the latest news.

Next