Advertisement

ಕೈಗಾ ಅಣು ವಿದ್ಯುತ್‌ ಸ್ಥಾವರ ವಿಸ್ತರಣೆಗೆ ತಡೆ; ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ

09:01 PM Oct 12, 2022 | Team Udayavani |

ನವದೆಹಲಿ: ಕೈಗಾ ಅಣು ವಿದ್ಯುತ್‌ ಸ್ಥಾವರದ ವಿಸ್ತರಣೆಗೆ ನ್ಯೂಕ್ಲಿಯರ್‌ ಪವರ್‌ ಕಾರ್ಪೋರೇಷನ್‌ ಆಫ್ ಇಂಡಿಯಾ ಲಿ.(ಎನ್‌ಪಿಸಿಐಎಲ್‌)ಗೆ ನೀಡಲಾಗಿದ್ದ ಅನುಮತಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ತಡೆ ಹಿಡಿದಿದೆ.

Advertisement

ಕೈಗಾದ ಘಟಕ 5 ಮತ್ತು 6ನ್ನು ವಿಸ್ತರಣೆ ಮಾಡಲು ನೀಡಿರುವಂತಹ ಜಾಗವು ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದಲ್ಲಿ ಬರುತ್ತದೆ. ಈ ವಿಸ್ತರಣೆಯಿಂದಾಗಿ ಅಲ್ಲಿನ ಜೀವವೈವಿಧ್ಯತೆಗೆ ತೊಂದರೆಯಾಗಲಿದೆ ಎಂದು ಕೈಗಾ ಅಣು ವಿದ್ಯುತ್‌ ಸ್ಥಾವರ ಮತ್ತು ಘಟಕ ವಿರೋಧಿ ಹೋರಾಟ ಸಮಿತಿಯು ಎನ್‌ಜಿಟಿಗೆ ಅರ್ಜಿ ಸಲ್ಲಿಸಿತ್ತು. ಆ ಅರ್ಜಿ ವಿಚಾರಣೆ ಮಾಡಿರುವ ನ್ಯಾಯಮೂರ್ತಿ ಕೆ.ರಾಮಕೃಷ್ಣನ್‌ ಮತ್ತು ಸತ್ಯಗೋಪಾಲ್‌ ಕೊರ್ಲಪಾರ್ಟಿ ಅವರನ್ನೊಳಗೊಂಡ ಎನ್‌ಜಿಟಿ ಪೀಠವು ಅನುಮತಿಯನ್ನು ತಡೆಹಿಡಿದಿದೆ.

ಎನ್‌ಪಿಸಿಐಎಲ್‌ ಮತ್ತೆ ಅನುಮತಿ ಸಿಗುವವರೆಗೆ ಯಾವುದೇ ರೀತಿಯಲ್ಲಿ ವಿಸ್ತರಣೆಯ ಕಾರ್ಯಾರಂಭ ಮಾಡುವಂತಿಲ್ಲ. ಹಾಗಿದ್ದರೂ, ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸುವ ನಿರ್ದೇಶನಗಳಿಗೆ ಒಳಪಟ್ಟು ನಿರ್ಮಾಣ ಕಾರ್ಯವನ್ನು ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೈಗಾದ 5 ಮತ್ತು 6ನೇ ಘಟಕ ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದಲ್ಲಿ ಬರುತ್ತದೆಯೇ ಎನ್ನುವುದನ್ನು ಪರಿಶೀಲನೆ ಮಾಡಬೇಕು. ಹಾಗೆಯೇ ಈ ಯೋಜನೆಯಿಂದ ಕೈಗಾ ಗ್ರಾಮದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವುದನ್ನೂ ಪರಿಶೀಲನೆ ಮಾಡಿ ಎಂದು ಪರಿಸರ ಮತ್ತು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ.

ಈ ಸಮಸ್ಯೆಯನ್ನು ಬಗೆಹರಿಸಲು ತೆಗೆದುಕೊಳ್ಳಬಹುದಾದಂತಹ ಕ್ರಮ, ಅಲ್ಲಿನ ನೀರಿನ ಲಭ್ಯತೆ, ಸೂಕ್ಷ್ಮ ವಲಯದ ಮೇಲೆ ಯೋಜನೆಯಿಂದಾಗಬಹುದಾದ ಪರಿಣಾಮ, ಅಲ್ಲಿನ ನೀರಿನ ಮೂಲಗಳ ಮೇಲಾಗಬಹುದಾದ ಪರಿಣಾಮ, ಘಟಕಗಳಲ್ಲಿ ಅಣು ವಿಕಿರಣದಿಂದಾಗಿ ಸ್ಥಳೀಯ ಜನರ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮದ ಮೇಲೆ ಅಧ್ಯಯನ ನಡೆಸಿ, ವರದಿ ಸಲ್ಲಿಸುವಂತೆ ಎನ್‌ಪಿಸಿಐಎಲ್‌ಗೆ ಸೂಚಿಸಲಾಗಿದೆ.

Advertisement

ಕೈಗಾ ಅಣು ಸ್ಥಾವರದ ಘಟಕ 5 ಮತ್ತು 6 ಅನ್ನು 235 ಮೆಗಾವ್ಯಾಟ್‌ನಿಂದ 700ಮೆಗಾವ್ಯಾಟ್‌ಗೆ ವಿಸ್ತರಿಸಲು 2019ರಲ್ಲಿ ಅನುಮತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next