Advertisement

ಗಂಗೆ ತಟದಲ್ಲಿ ಕಸ: 50,000 ದಂಡ

04:25 AM Jul 14, 2017 | Karthik A |

ಹೊಸದಿಲ್ಲಿ: ಗಂಗಾ ನದಿ ರಕ್ಷಣೆಗೆ ದಿಟ್ಟ ಹೆಜ್ಜೆ ಇರಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಹರಿದ್ವಾರದಿಂದ ಉನ್ನಾವ್‌ವರೆಗಿನ ಗಂಗಾ ನದಿಯ ತಟದಿಂದ 100 ಮೀಟರ್‌ ವ್ಯಾಪ್ತಿಯನ್ನು ‘ಅಭಿವೃದ್ಧಿಯೇತರ ವಲಯ’ ಎಂದು ಘೋಷಿಸಿದೆ. ಜತೆಗೆ, ನದಿ ದಡದಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ಸುರಿಯುವಿಕೆಯನ್ನು ನಿರ್ಬಂಧಿಸಿ ಆದೇಶಿಸಿದೆ. ಎನ್‌ಜಿಟಿ ಮುಖ್ಯಸ್ಥ‌ ನ್ಯಾ| ಸ್ವತಂತ್ರ ಕುಮಾರ್‌ ನೇತೃತ್ವದ ಪೀಠ ಈ ಆದೇಶ ಹೊರಡಿಸಿದ್ದು, ತನ್ನ ಆದೇಶ ಮೀರಿ ಯಾರಾದರೂ ನದಿ ದಡದಿಂದ 500 ಮೀ. ವ್ಯಾಪ್ತಿಯ ಒಳಗೆ ತ್ಯಾಜ್ಯ ಸುರಿಯುವ ದುಸ್ಸಾಹಸ ಮಾಡಿದರೆ ‘ಪರಿಸರ ಪರಿಹಾರ’ದ ರೂಪದಲ್ಲಿ 50,000 ರೂ. ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Advertisement

ಅಲ್ಲದೆ, ಚರಂಡಿಗಳ ಸ್ವಚ್ಛತೆ, ತ್ಯಾಜ್ಯ ನೀರು ಸಂಸ್ಕರಣೆ ಘಟಕ ಸ್ಥಾಪನೆ ಸೇರಿ ನದಿ ಸ್ವಚ್ಛವಾಗಿಡಲು ಎಲ್ಲ ರೀತಿಯ ಕಾಮಗಾರಿಗಳನ್ನು 2 ವರ್ಷದೊಳಗೆ ಪೂರ್ಣಗೊಳಿಸುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸೂಚನೆ ನೀಡಿದೆ. ಇದರೊಂದಿಗೆ ಉನ್ನಾವ್‌ ಸಹಿತ ತನ್ನ ಆದೇಶದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿನ ಚರ್ಮ ಹದ ಮಾಡುವ ಕೇಂದ್ರಗಳನ್ನು (ಟ್ಯಾನರಿ) ಕಾನ್ಪುರದ ಲೆದರ್‌ ಪಾರ್ಕ್‌ಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದೆ.

ಸಿಬಿಐ ತನಿಖೆಯಾಗಲಿ
ಹರಿದ್ವಾರ- ಉನ್ನಾವ್‌ ನಡುವಿನ 500 ಕಿ.ಮೀ. ಉದ್ದದ ಗಂಗಾ ನದಿ ಪಾತ್ರದ ಸ್ವಚ್ಛತೆಗೆ ಕೇಂದ್ರ, ರಾಜ್ಯ ಸರಕಾರ 7,000 ಕೋಟಿ ರೂ. ವೆಚ್ಚ ಮಾಡಿದೆ ಎಂದು ಹೇಳುತ್ತಿವೆ. ಆದರೆ, ಗಂಗಾ ಇನ್ನೂ ಸ್ವತ್ಛ ವಾಗಿಲ್ಲ. ಈ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ಖ್ಯಾತ ಪರಿಸರ ತಜ್ಞ ಹಾಗೂ ವಕೀಲ ಎಂ.ಸಿ.ಮೆಹತಾ ಎನ್‌ಜಿಟಿಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next