Advertisement

ರಾಜ್ಯ ಸರ್ಕಾರಕ್ಕೆ ಎನ್‌ಜಿಟಿ ಚಾಟಿ

12:23 PM Apr 12, 2018 | |

ಬೆಂಗಳೂರು: ತಪ್ಪು ಮಾಹಿತಿ ನೀಡಿ, ನ್ಯಾಯಾಧೀಕರಣವನ್ನು ದಾರಿ ತಪ್ಪಿಸಲು ಮುಂದಾದ ರಾಜ್ಯ ಸರ್ಕಾರವನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಬೆಳ್ಳಂದೂರು ಕೆರೆ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಪರಿಶೀಲನೆಗೆ ಹಿರಿಯ ವಕೀಲ ರಾಜ್‌ ಪಂಜ್ವಾನಿ ನೇತೃತ್ವದಲ್ಲಿ ಸಮಿತಿ ರಚಿಸಿ ಆದೇಶಿಸಿದೆ.

Advertisement

ಬೆಳ್ಳಂದೂರು ಕೆರೆ ಸಂರಕ್ಷಣೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ವರದಿ ಪರಿಶೀಲಿಸಿದ ನ್ಯಾಯಾಧೀಕರಣವು, ವರದಿ ಅಪೂರ್ಣವಾಗಿರುವ ಜತೆಗೆ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ವಿಚಾರಣೆಗೆ ಹಾಜರಾದ ಬಿಡಿಎ ಎಂಜಿನಿಯರ್‌ ನಾಗರಾಜ್‌ರನ್ನು ತರಾಟೆಗೆ ತೆಗೆದುಕೊಂಡಿದೆ. ಜತೆಗೆ ಇತ್ತೀಚೆಗೆ ಮತ್ತೆ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿರುವ ನಾಗರಾಜ್‌, ಜನವರಿ 19 ರಿಂದೀಚೆಗೆ ಕೆರೆಯಲ್ಲಿ ಯಾವುದೇ ರೀತಿಯ ಬೆಂಕಿ ಕಾಣಿಸಿಕೊಂಡಿಲ್ಲ ಎಂದು ಉತ್ತರಿಸಿದ್ದಾರೆ.

ಬೆಳ್ಳಂದೂರು ಕೆರೆ ಸಂರಕ್ಷಣೆಗೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಕೈಗೊಂಡಿರುವ ಕ್ರಮಗಳಿಂದ ಸಮಾಧಾನ ಗೊಳ್ಳದ ನ್ಯಾಯಾಧೀಕರಣ, ಸರ್ಕಾರದಿಂದ ಕೆರೆ ಸ್ವತ್ಛತೆಹಾಗೂ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಪರಿಶೀಲನೆಗಾಗಿ ಸಮಿತಿ ರಚಿಸಿದ್ದು, ಸಮಿತಿ ರಚನೆಗೆ ಅಗತ್ಯ 5 ಲಕ್ಷ ರೂ. ಠೇವಣಿಯನ್ನು ಬಿಡಿಎ ಭರಿಸಬೇಕು ಎಂದು ಸೂಚಿಸಿದೆ. ನ್ಯಾಯಾಧೀಕರಣದ ಸೂಚನೆ ಮೇರೆಗೆ ರಾಜ್‌ ಪಂಜ್ವಾನಿ ನೇತೃತ್ವದ ಸಮಿತಿಯು ಏಪ್ರಿಲ್‌ 14 ಹಾಗೂ 15ರಂದು ನಗರಕ್ಕೆ ಆಗಮಿಸಲಿದ್ದು, ಬೆಳ್ಳಂದುರು, ವರ್ತೂರು ಹಾಗೂ
ಅಗರ ಕೆರೆಗಳಿಗೆ ಭೇಟಿ ನೀಡಿ ಸರ್ಕಾರದಿಂದ ಕೆರೆ ಸಂರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಿ, ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಸಲಿದೆ. 

ಸಮಿತಿಯಲ್ಲಿ ಯಾರಿದ್ದಾರೆ?
ಸಮಿತಿಯ ನೇತೃತ್ವ ವಹಿಸಿರುವ ಹಿರಿಯ ವಕೀಲ ರಾಜ್‌ ಪಂಜ್ವಾನಿ ಅವರಿಗೆ ಸಹಾಯಕರಾಗಿ ಒಬ್ಬರು ಕಿರಿಯ ವಕೀಲ ರನ್ನು ನೇಮಿಸಿ ಕೊಳ್ಳಲು ಅವಕಾಶ ನೀಡಲಾಗಿದೆ. ಉಳಿದಂತೆ ಸಮಿತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಒಬ್ಬರು ಪ್ರಾಧ್ಯಾಪಕರು, ಬಿಬಿಎಂಪಿ ಆಯುಕ್ತರು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ವಿಜ್ಞಾನಿ, ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಸಿಇಒ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಇರಲಿದ್ದು, ನಗರ ಪೊಲೀಸ್‌ ಆಯುಕ್ತರು ಸಮಿತಿಗೆ ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಎನ್‌ಜಿಟಿ ಸೂಚಿಸಿದೆ.  

ಸಮಿತಿ ಪರಿಶೀಲಿಸುವ ಪ್ರಮುಖ ಅಂಶಗಳು
 ಏಪ್ರಿಲ್‌ 10ರವರೆಗೆ ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ ಪ್ರಕರಣಗಳು
„ ಕಳೆದ 25 ವರ್ಷಗಳ ಹಿಂದಿನ ಹಾಗೂ ಸದ್ಯದ ಕೆರೆ ವಿಸ್ತೀರ್ಣ
„ ಕೆರೆಯಲ್ಲಿರುವ ಜೋಂಡು ಪ್ರಮಾಣ
„ ತೆರವುಗೊಳಿಸಿದ ಜೋಂಡು ಹಾಗೂ ಜಲಸಸ್ಯಗಳ ಪ್ರಮಾಣ
„ ಒಳಚರಂಡಿ ನೀರು ಕೆರೆಗೆ ಸೇರುತ್ತಿರುವ ಪ್ರಮಾಣ
„ ಕೆರೆಯಲ್ಲಿರುವ ಹೂಳು, ಇತರೆ ತ್ಯಾಜ್ಯ
„ ಕೆರೆಯ ಸುತ್ತಮುತ್ತಲಿನ ಭಾಗಗಳಲ್ಲಿ ಸುರಿಯಲಾಗುತ್ತಿರುವ ಘನತ್ಯಾಜ್ಯ ಪ್ರಮಾಣ
„ ಕೆರೆಯ ಸುತ್ತ ಇರುವ ತ್ಯಾಜ್ಯನೀರು ಶುದ್ಧೀಕರಣ ಘಟಕಗಳು
„ ಕೆರೆಯ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳು ಪಾಲಿಕೆಯಿಂದ ಪಡೆದಿರುವ ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ)

Advertisement

ಸರ್ಕಾರಕ್ಕೆ 2016ರಲ್ಲಿಯೇ ತಜ್ಞರ ಸಮಿತಿ ವರದಿ ಸಲ್ಲಿಸಿದೆ. ಆದರೆ, ಕಾಲಮಿತಿಯಲ್ಲಿ ವರದಿ ಅನುಷ್ಠಾನಗೊಳಿಸದೆ ತಾತ್ಕಾಲಿಕ ಪರಿಹಾರ ಕಾರ್ಯಗಳನ್ನು ಸರ್ಕಾರ ಕೈಗೊಂಡಿತ್ತು. ಆ ಹಿನ್ನೆಲೆಯಲ್ಲಿ ನ್ಯಾಯಾಧೀಕರಣವೇ ಸರ್ಕಾರ ಕೆರೆ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸಮಿತಿ ರಚಿಸಿರುವುದು ಕೆರೆಯ ಪುನರುಜ್ಜೀವನಕ್ಕೆ ಸಹಾಯವಾಗಲಿದೆ.
ಶ್ರೀಧರ್‌ ಪಬ್ಬಿಸೆಟ್ಟಿ, ನಮ್ಮ ಬೆಂಗಳೂರು ಫೌಂಡೇಷನ್‌ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next