Advertisement

ಯೋಜನೆ ಯಶಸ್ವಿಯಲ್ಲಿ ಎನ್‌ಜಿಒ ಪಾತ್ರ ಹಿರಿದು

12:15 PM Mar 03, 2022 | Team Udayavani |

ಬೀದರ: ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸಂಪರ್ಕ ಸೇತುವೆಗಳಾಗಿ ನಿಸ್ವಾರ್ಥ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್‌ ಹೇಳಿದರು.

Advertisement

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಶ್ವ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಪ್ರತಿಯೊಂದು ಯೋಜನೆಗಳು ಯಶಸ್ವಿಯಾಗಲು ಎನ್‌ಜಿಒಗಳ ಪಾತ್ರ ಮಹತ್ತರವಾಗಿದೆ. ಸೇವಾ ಮನೋಭಾವದಿಂದ ಸಂಸ್ಥೆಗಳು ಜಿಲ್ಲೆಯಲ್ಲಿ ಸರ್ಕಾರದ ಯೋಜನೆಗಳು ಯಶಸ್ವಿ ಅನುಷ್ಠಾನಕ್ಕೆ ಆಡಳಿತದ ಜೊತೆಯಲ್ಲಿ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.

ಎನ್‌ಜಿಒಗಳ ಒಕ್ಕೂಟಕ್ಕೆ ಬೇಕಾದ ಭವನಕ್ಕಾಗಿ ಸ್ಥಳ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಹೀರಾ ನಸೀಮ್‌ ಇದೇ ವೇಳೆ ಭರವಸೆ ನೀಡಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸಿದ್ರಾಮ್‌ ಟಿ.ಪಿ. ಮಾತನಾಡಿ, ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಜೀವನದ ಹಂಗು ತೊರೆದು ಸಾರ್ವಜನಿಕರಿಗೆ ಲಸಿಕೆ ಹಾಕಿಸಲು ಸತತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಶೇ.70ರಷ್ಟು ಸ್ವಯಂ ಸೇವಾ ಸಂಸ್ಥೆಗಳು ಕೋವಿಡ್‌-19 ಸಂದರ್ಭದಲ್ಲಿ ಕಾರ್ಯನಿರ್ವಹಿಸಿವೆ ಎಂದರು.

ಡಿಎಚ್‌ಒ ಡಾ| ರತಿಕಾಂತ ಸ್ವಾಮಿ ಮಾತನಾಡಿ, 1970ರಲ್ಲಿ ದೇವಿ ಕಾಯಿಲೆ, 1990ರಲ್ಲಿ ಪಲ್ಸ್‌ ಪೋಲಿಯೋ, 2019ರಲ್ಲಿ ಕೋವಿಡ್‌ನ‌ಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ದಾದಿಯರು, ಆಶಾ ಕಾರ್ಯಕರ್ತರ ಜೊತೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಕೈ ಜೋಡಿಸಿದ್ದರಿಂದ ಮಹಾಮಾರಿ ರೋಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು ಎಂದು ಹೇಳಿದರು.

Advertisement

ಫೆವಾರ್ಡ್‌-ಕೆ ವಿಭಾಗ ನಿರ್ದೇಶಕ ಅನಿಲಕುಮಾರ ಬೆಲ್ದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಗಳು ಯಾವುದೇ ಫಲಾಫೇಕ್ಷೆ ಇಲ್ಲದೇ ಸರ್ಕಾರದ ಜೊತೆಯಲ್ಲಿ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸುತ್ತಿವೆ. ಒಕ್ಕೂಟಕ್ಕೆ ಕಾರ್ಯಕ್ರಮ ಮಾಡಲು ಸ್ವಂತ ಭವನ ಇಲ್ಲ. ಬೀದರ ನಗರದಲ್ಲಿ ಒಂದು ಭವನವಿದ್ದು, ಅದನ್ನು ಒಕ್ಕೂಟಕ್ಕೆ ವಹಿಸಬೇಕು ಹಾಗೂ ಸಿಎಸ್‌ಆರ್‌ ನಿಧಿ ಸಹ ಸರ್ಕಾರದಿಂದ ಕೊಡಿಸಬೇಕು ಎಂದು ಮನವಿ ಮಾಡಿದರು.

ಎಫ್‌ಪಿಎಐ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಯಲ್ಲಮ್ಮಾ ಮಾತನಾಡಿದರು. ಫೆವಾರ್ಡ್‌-ಕೆ ಜಿಲ್ಲಾಧ್ಯಕ್ಷ ಬಾಬು ಸಂಗ್ರಾಮ ಅಧ್ಯಕ್ಷತೆ ವಹಿಸಿದ್ದರು. ಟಿ.ಜೆ. ಹಾದಿಮನಿ ವರದಿ ವಾಚನ ಮಾಡಿದರು. ಪ್ರಕಾಶ ಡೊಳೆ ನಿರೂಪಿಸಿದರು.

ಇದೇ ವೇಳೆ ಕವಿತಾ ಹುಷಾರೆ, ಸುರೇಖಾ, ವಿಜಯಲಕ್ಷ್ಮೀ, ಮಂಗಲಾ ಮರಕಲೆ, ಡಾ| ಶಿವಕುಮಾರ, ಡಾ| ಫೈಜಲ್‌, ಬಿಲಾಲ್‌ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಂ.ಡಿ. ಶಫಿಯೊದ್ದೀನ್‌, ಡಾ| ಸುಜಾತಾ ಹೊಸಮನಿ, ಅರುಣ ಪಟೇಲ್‌, ಕೆ.ಟಿ. ಮೇರಿಲ್‌ ಇನ್ನಿತರ ಎನ್‌ಜಿಒದವರು, ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next