Advertisement

ಮುಂದಿನ ವರ್ಷ ಬಂಡವಾಳ ಹೂಡಿಕೆದಾರರ ಸಮಾವೇಶ

11:54 AM Dec 05, 2021 | Team Udayavani |

ಕಲಬುರಗಿ: ರಾಜ್ಯದಲ್ಲಿ ಕೈಗಾರಿಕೋದ್ಯಮ ಬೆಳವಣಿಗೆ ಹೆಚ್ಚಿಸಲು 2022ರ ನವೆಂಬರ್‌ದಲ್ಲಿ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ (ಕೈಗಾರಿಕಾ) ಹೂಡಿಕೆದಾರರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್‌ 2ರಿಂದ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರ ಸಮಾವೇಶದಲ್ಲಿ ವಿಶ್ವದ ಪ್ರತಿಷ್ಠಿತ 300ಕ್ಕೂ ಅಧಿಕ ಕೈಗಾರಿಕೋದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯದಾದ್ಯಂತ ಹೊಸ ಉದ್ಯಮಗಳು ಆರಂಭವಾಗಿವ ನಿಟ್ಟಿನಲ್ಲಿ ಹಾಗೂ ಹೊಸ ಉದ್ಯಮಕ್ಕೆ ಪ್ರೋತ್ಸಾಹಿಸಲು ಮುಂದಾಗಿ ಸಮಾವೇಶ ಆಯೋಜಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಅದರಲ್ಲೂ ಕಲಬುರಗಿಯಲ್ಲಿ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗಲೆಂದು ಕಲಬುರಗಿ ವಿಮಾನ ನಿಲ್ದಾಣ ಪಕ್ಕದಲ್ಲಿ ಎರಡು ಸಾವಿರ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಒಟ್ಟಾರೆ ಹೊಸ ಉದ್ಯಮಗಳು ಕಲಬುರಗಿಯಲ್ಲಿ ಬರಲು ವಿಶೇಷವಾಗಿ ಯತ್ನಿಸಲಾಗುವುದು ಎಂದು ತಿಳಿಸಿದರು.

ಕಳೆದ ತಿಂಗಳು ಕಲಬುರಗಿಯಲ್ಲಿ ನಡೆಸಬೇಕಿದ್ದ “ಉದ್ಯಮಿಯಾಗು ಉದ್ಯೋಗ ನೀಡು’ ಕಾರ್ಯಾಗಾರ ಹಾಗೂ ಅದಾಲತ್‌ನ್ನು ಜನವರಿ ಮೊದಲ ವಾರದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಿಮೆಂಟ್‌ ಜತೆಗೆ ಇತರ ಉದ್ಯಮಗಳು ಸ್ಥಾಪನೆಯಾಗಬೇಕು. ಮುಖ್ಯವಾಗಿ ಈ ಭಾಗದಲ್ಲಿ ಹೊಸ ಉದ್ಯಮಗಳ ಆರಂಭಕ್ಕೆ ಬಂಡವಾಳ ಹೂಡಿಕೆದಾರರು ಮುಂದೆ ಬರಬೇಕು ಎಂದರು.

ಒಮಿಕ್ರಾನ್‌ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆಕ್ಸಿಜನ್‌ ಕೊರತೆಯಾಗದಂತೆ ಸೂಚಿಸಲಾಗಿದೆ. ಅಲ್ಲದೇ ಈಗಾಗಲೇ ಆಕ್ಸಿಜನ್‌ ಘಟಕ ಕಾರ್ಯಾರಂಭವಾಗಿವೆ. ಒಮಿಕ್ರಾನ್‌ ತಡೆಯಲು ದಶ ಸೂತ್ರಗಳನ್ನು ರೂಪಿಸಲಾಗಿದೆ ಎಂದರು.

2023 ಚುನಾವಣೆ ನಂತರ ಹೊಸ ಸಿಎಂ ಚರ್ಚೆಗೆ

Advertisement

2023ರ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು, ಆ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ. ಪಕ್ಷದ ತೀರ್ಮಾನಕ್ಕೆ ತಾವು ಬದ್ಧರಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next