Advertisement

ವೈದ್ಯರ ಉತ್ಪಾದನೆಯಲ್ಲಿ ಮುಂದೆ; ಸೇವೆ ಪಡೆಯಲುವಲ್ಲಿ ಹಿಂದೆ

12:48 PM Jun 03, 2017 | |

ಬೆಂಗಳೂರು: “ವೈದ್ಯರ ಉತ್ಪಾದನೆಯಲ್ಲಿ ಕರ್ನಾಟಕ ನಂಬರ್‌ ಒನ್‌ ಸ್ಥಾನದಲ್ಲಿದ್ದರೂ, ಅವರನ್ನು ಸರ್ಕಾರಿ ಸೇವೆಗೆ ಬಳಸಿಕೊಳ್ಳುವಲ್ಲಿ ರಾಜ್ಯ ಹಿಂದೆ ಬಿದ್ದಿದೆ,’ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ವಿಷಾದ ವ್ಯಕ್ತಪಡಿಸಿದ್ದಾರೆ. 

Advertisement

ಸಂಜಯಗಾಂಧಿ ಟ್ರಾಮ ಮತ್ತು ಅಸ್ತಿ ಚಿಕಿತ್ಸಾ ಸಂಸ್ಥೆಯಲ್ಲಿ ಶುಕ್ರವಾರ ಅತ್ಯಾಧುನಿಕ ಸಿ.ಟಿ. ಸ್ಕ್ಯಾನ್‌ ಯಂತ್ರದ ಸೇವೆ ಹಾಗೂ ಮಂಡಿ (ಮೊಣಕಾಲು) ಉಚಿತ ಮರು ಜೋಡಣೆ ಶಿಬಿರಕ್ಕೆ ಚಾಲನೆ ಸಚಿವರು ಚಾಲನೆ ನೀಡಿದರು. ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಷ್ಟೇ ಸಂಬಳ, ಏನೇ ಸೌಲಭ್ಯ ಕೊಟ್ಟರೂ ವೈದ್ಯರು ಮಾತ್ರ ಸರ್ಕಾರಿ ಆಸ್ಪತ್ರೆಗಳ ಸೇವೆಗೆ ಮನಸ್ಸು ಮಾಡುತ್ತಿಲ್ಲ. ಇದು ನೋವಿನ ಸಂಗತಿ,’ ಎಂದು ಹೇಳಿದರು. 

“ಸರ್ಕಾರಿ, ಖಾಸಗಿ ಹಾಗೂ ಸ್ವಾಯತ್ತ ಸೇರಿ ರಾಜ್ಯದಲ್ಲಿ ಒಟ್ಟು 53 ವೈದ್ಯಕೀಯ ಕಾಲೇಜುಗಳಿವೆ. ಈ ಕಾಲೇಜುಗಳಿಂದ ಪ್ರತಿ ವರ್ಷ ಸಾವಿರಾರು ವೈದ್ಯರು ಹೋರ ಬರುತ್ತಾರೆ. ಒಂದರ್ಥದಲ್ಲಿ ಕರ್ನಾಟಕದಲ್ಲಿ ವೈದ್ಯರ ಉತ್ಪಾದನೆಯೇ ಆಗುತ್ತಿದೆ. ವೈದ್ಯರ ಉತ್ಪಾದನೆಯಲ್ಲಿ ರಾಜ್ಯ ನಂಬರ್‌ ಒನ್‌ ಸ್ಥಾನದಲ್ಲಿದೆ. ಆದರೆ, ಹಳ್ಳಿಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆ ವೈದ್ಯರ ಸೇವೆ ಬಳಸಿಕೊಳ್ಳುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ,” ಎಂದರು. 

“ತಿಂಗಳಿಗೆ 1.20 ಲಕ್ಷ ರೂ. ವೇತನ ಕೊಡುತ್ತೇವೆ ಎಂದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಮನಸ್ಸು ಮಾಡುತ್ತಿಲ್ಲ. ಇಷ್ಟಾದರೂ ಸರ್ಕಾರಿ ಆಸ್ಪತ್ರೆಗಳ ಮೂಲಕ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಮಾತ್ರ ಹಿಂದೆ ಬಿದ್ದಿಲ್ಲ,’ ಎಂದು ತಿಳಿಸಿದರು. 

“ರಾಜ್ಯದಲ್ಲಿ 2,353 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇವುಗಳಲ್ಲಿ ಖಾಲಿ ಇರುವ ಬಹುತೇಕ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಜೊತೆಗೆ ಅರೆ ವೈದ್ಯಕೀಯ ಹಾಗೂ ಡಿ ಗ್ರೂಪ್‌ ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗಿದೆ. ಸದ್ಯ 900 ತಜ್ಞ ವೈದ್ಯರ ಹುದ್ದೆಗಳ ಕೊರತೆ ಇದೆ. ಅದಕ್ಕಾಗಿ ರಾಜ್ಯದ 11 ಜಿಲ್ಲಾ ಆಸ್ಪತ್ರೆಗಳಲ್ಲಿ ಡಿಎನ್‌ಬಿ ಕೋರ್ಸ್‌ ಪ್ರಾರಂಭಿಸಲಾಗಿದೆ.

Advertisement

ಈಗಾಗಲೇ ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಮಲ್ಲೇಶ್ವರಂನ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಡಿಎನ್‌ಬಿ ಕೋರ್ಸ್‌ ಆರಂಭವಾಗಿದೆ. ಉಳಿದ ಕಡೆಯೂ ಇದೇ ಶೈಕ್ಷಣಿಕ ವರ್ಷದಿಂದಲೇ ಕೋರ್ಸ್‌ ಆರಂಭವಾಗಲಿದೆ. ಇನ್ನೆರಡು ವರ್ಷದಲ್ಲಿ ವೈದ್ಯರ ಕೊರತೆ ಇಲ್ಲದಂತೆ ಮಾಡಲಾಗುವುದು,’ ಎಂದರು.

ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕ ಡಾ. ಎಚ್‌.ಎಸ್‌. ಚಂದ್ರಶೇಖರ್‌ ಮಾತನಾಡಿ, “ಸಂಸ್ಥೆಯಲ್ಲಿ 3.24 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲಾದ ಅತ್ಯಾಧುನಿಕ ಸಿ.ಟಿ. ಸ್ಕ್ಯಾನ್‌ ಯಂತ್ರ ಅಳವಡಿಸಲಾಗಿದೆ. ಇದರ ಜೊತೆಗೆ 70 ಲಕ್ಷ ರೂ. ವೆಚ್ಚದಲ್ಲಿ “ಪ್ಯಾಕ್ಸ್‌ ಸಿಸ್ಟಿಮ್‌’ ಯಂತ್ರ ಸಹ ಅಳವಡಿಸಲಾಗಿದೆ.

ಇದಲ್ಲದೇ ಬಡವರಿಗಾಗಿ “ಸಂಪೂರ್ಣ ಮಂಡಿ (ಮೊಣಕಾಲು) ಉಚಿತ ಜೋಡಣೆ’ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 2.50ರಿಂದ 5 ಲಕ್ಷ ರೂ. ವೆಚ್ಚವಾದರೆ, ನಮ್ಮ ಸಂಸ್ಥೆಯಲ್ಲಿ 90 ಸಾವಿರ ರೂ. ಖರ್ಚಾಗುತ್ತದೆ. ಬಡಜನರಿಗೆ ಉಚಿತವಾಗಿ ಮಂಡಿ ಮರು ಜೋಡಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಅಂಗವಾಗಿ 100 ಮಂದಿಗೆ ಉಚಿತ ಮಂಡಿ ಮರು ಜೋಡಣೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ,’ ಎಂದು ವಿವರಿಸಿದರು. 

ನಿಮ್ಹಾನ್ಸ್‌ ಸಂಸ್ಥೆಯ ನಿರ್ದೇಶಕ ಪ್ರೊ. ಬಿ.ಎನ್‌. ಗಂಗಾಧರ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕಿ ಡಾ. ಆಶಾ ಬೆನಕಪ್ಪ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next