Advertisement

ಮೂರು ದಿನ ಮತ್ತೆ ಆತಂಕ

06:00 AM Aug 12, 2018 | Team Udayavani |

ತಿರುವನಂತಪುರ: ಕೇರಳದಲ್ಲಿ ಶನಿವಾರ ಸ್ವಲ್ಪಮಟ್ಟಿಗೆ ವಿರಮಿಸಿದ್ದ ವರುಣ ಭಾನುವಾರದಿಂದ ಮತ್ತೆ ಆರ್ಭಟ ಶುರುವಿಟ್ಟುಕೊಳ್ಳಲಿದ್ದಾನೆ. ಕೇರಳದಾದ್ಯಂತ ಭಾನುವಾರದಿಂದ ಮೂರು ದಿನ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಯನಾಡ್‌ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಆ.14ರವರೆಗೆ ರೆಡ್‌ ಅಲರ್ಟ್‌ ಮತ್ತು ಆ.15ಕ್ಕೆ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಹೀಗಾಗಿ, ಶನಿವಾರ ಒಂದು ದಿನದ ಮಟ್ಟಿಗಷ್ಟೇ ಕೇರಳಿಗರಿಗೆ ಮಳೆಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದಂತಾಗಿದೆ.

Advertisement

ರಾಜ್ಯದ 14ರ ಪೈಕಿ 11 ಜಿಲ್ಲೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಕೇಂದ್ರ ಸರ್ಕಾರ ಕಳುಹಿಸಿರುವ ಸೇನಾ ಸಿಬ್ಬಂದಿಯು ಅವಿರತವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ಕೇಂದ್ರ ಸಚಿವ ಕೆ.ಜೆ.ಅಲ್ಪೋನ್ಸ್‌ ತಿಳಿಸಿದ್ದಾರೆ. ಈಗಾಗಲೇ ಮಳೆ, ಭೂಕುಸಿತ, ಪ್ರವಾಹದಿಂದಾಗಿ ರಾಜ್ಯದಲ್ಲಿ 30 ಮಂದಿ ಮೃತಪಟ್ಟಿದ್ದು, ಸುಮಾರು 54 ಸಾವಿರ ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ಸಿಎಂ ವೈಮಾನಿಕ ಸಮೀಕ್ಷೆ: ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಶನಿವಾರ ಪ್ರವಾಹಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ಅವರ ಹೆಲಿಕಾಪ್ಟರ್‌ಗೆ ಇಡುಕ್ಕಿಯ ಕಟ್ಟಪಾನಾದಲ್ಲಿ ಇಳಿಯಲು ಸಾಧ್ಯವಾಗಲಿಲ್ಲ. ಬಳಿಕ ಅವರು ವಯನಾಡ್‌ಗೆ ತೆರಳಿ ಅಲ್ಲಿನ ಪರಿಹಾರ ಶಿಬಿರಗಳಿಗೂ ಭೇಟಿ ನೀಡಿ, ಪರಿಶೀಲನಾ ಸಭೆ ನಡೆಸಿದ್ದಾರೆ. ಸಿಎಂ ಜೊತೆಗೆ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ, ಕಂದಾಯ ಸಚಿವ ಇ. ಚಂದ್ರಶೇಖರನ್‌, ಮುಖ್ಯ ಕಾರ್ಯದರ್ಶಿ ಟಾಮ್‌ ಜೋಸ್‌ ಕೂಡ ಇದ್ದರು. ಇದೇ ವೇಳೆ, ಸಿಎಂ ಪಿಣರಾಯಿ ಅವರು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ವೈಯಕ್ತಿಕವಾಗಿ 1 ಲಕ್ಷ ರೂ.ಗಳ ಕೊಡುಗೆ ನೀಡಿದ್ದಾರೆ. ಜತೆಗೆ, ನೆರವು ನೀಡುವಂತೆ ಇತರರನ್ನೂ ಕೋರಿದ್ದಾರೆ. 

ಇಂದು ರಾಜನಾಥ್‌ ಭೇಟಿ: ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಭಾನುವಾರ ಕೇರಳಕ್ಕೆ ಭೇಟಿ ನೀಡಿ, ಪ್ರವಾಹಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. 

ನೆರವಿಗೆ ರಾಹುಲ್‌ ಪತ್ರ: ಕೇರಳ ಸರ್ಕಾರಕ್ಕೆ ಸಾಕಷ್ಟು ನೆರವು ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪತ್ರ ಬರೆದಿದ್ದಾರೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ, ಈ ಬಾರಿಯದ್ದು ಅತ್ಯಂತ ಗಂಭೀರ ವಿಕೋಪವಾಗಿದೆ. ಹೀಗಾಗಿ ಪರಿಹಾರ ಹಾಗೂ ರಕ್ಷಣಾ ಕಾರ್ಯದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ನೆರವಾಗಬೇಕು ಎಂದು ರಾಹುಲ್‌ ಮನವಿ ಮಾಡಿದ್ದಾರೆ. ಅಲ್ಲದೆ, ಅಗತ್ಯವಿರುವ ಜನರಿಗೆ ನಿಮ್ಮಿಂದಾದಷ್ಟು ಸಹಾಯ ಮಾಡಿ ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೂ ಅವರು ಕರೆ ನೀಡಿದ್ದಾರೆ.

Advertisement

ಮನೆಗೆ ಬರಲು ಹಿಂಜರಿಯುತ್ತಿರುವ ಸಂತ್ರಸ್ತರು
ಮನೆಯೊಳಗೆ ಎಲ್ಲೆಲ್ಲೂ ಕೆಸರು, ಬಾವಿಯಲ್ಲೂ ತುಂಬಿದ ಕೊಚ್ಚೆ ನೀರು, ಮುಚ್ಚಿಹೋಗಿರುವ ಶೌಚಾಲಯ, ಅತ್ತಿತ್ತ ಸಂಚರಿಸುತ್ತಿರುವ ಹಾವು ಮತ್ತಿತರ ಜಲಚರಗಳು…. ಹೀಗಿರುವಾಗ ಮನೆಗಳಿಗೆ ವಾಪಸ್ಸಾಗುವುದಾದರೂ ಹೇಗೆ? ಹೀಗೆಂದು ಪ್ರಶ್ನಿಸುತ್ತಿದ್ದಾರೆ ಕೇರಳದ ಪರಿಹಾರ ಶಿಬಿರಗಳಲ್ಲಿರುವ ಜನ. 

“ಇಡುಕ್ಕಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬ ಕಾರಣಕ್ಕೆ ಒಮ್ಮಿಂದೊಮ್ಮೆಲೇ ನಮ್ಮ ಮನೆಗಳನ್ನು ಖಾಲಿ ಮಾಡಿಸಲಾಯಿತು. ಉಟ್ಟ ಬಟ್ಟೆಯಲ್ಲೇ ನಾವು ಶಿಬಿರಗಳಿಗೆ ಬಂದೆವು. ಆದರೆ, ಈಗ ಮನೆಗಳಿಗೆ ವಾಪಸ್ಸಾಗಲು ಭಯವಾಗುತ್ತಿದೆ’ ಎಂದು ಸಂತ್ರಸ್ತರು ಹೇಳುತ್ತಿದ್ದಾರೆ. ಇದೇ ವೇಳೆ, ನಟ ಮಮ್ಮುಟ್ಟಿ ಅವರು ಶುಕ್ರವಾರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಭರವಸೆ ತುಂಬಿದ್ದಾರೆ. ಈ ಎಲ್ಲ ಸಮಸ್ಯೆಗಳೂ ತಾತ್ಕಾಲಿಕ. ಸದ್ಯದಲ್ಲೇ ಎಲ್ಲವೂ ಸರಿಯಾಗಲಿದೆ. ನಾವು ನಿಮ್ಮ ಜತೆಗಿದ್ದೇವೆ ಎಂದು ಹೇಳಿದ್ದಾರೆ.

54,000 ಪರಿಹಾರ ಶಿಬಿರಗಳಲ್ಲಿರುವ ಸಂತ್ರಸ್ತರು
11ಜಿಲ್ಲೆಗಳು ಸಂಪೂರ್ಣ ಜಲಾವೃತ
4ಲಕ್ಷ  ಮೃತರ ಕುಟುಂಬಕ್ಕೆ ಪರಿಹಾರ
10 ಲಕ್ಷ  ಆಸ್ತಿಪಾಸ್ತಿ ಕಳೆದು ಕೊಂಡವರಿಗೆ ಪರಿಹಾರ

Advertisement

Udayavani is now on Telegram. Click here to join our channel and stay updated with the latest news.

Next