Advertisement

Bantwal ಬಿ.ಸಿ. ರೋಡಿನಲ್ಲಿ ಖೋಟಾ ನೋಟು ಗ್ಯಾಂಗ್‌ ಸೆರೆ

01:06 AM May 12, 2024 | Team Udayavani |

ಬಂಟ್ವಾಳ: ಖೋಟಾ ನೋಟು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ತಂಡವೊಂದನ್ನು ಪತ್ತೆ ಹಚ್ಚುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದು, ಬಿ.ಸಿ. ರೋಡಿನಲ್ಲಿ ಇಬ್ಬರನ್ನು ಬಂಧಿಸಿ 500 ರೂ. ಮುಖಬೆಲೆಯ ನೋಟುಗಳ ಸಹಿತ ನಗದು-ಮೊಬೈಲ್‌ಗ‌ಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಕಾಸರಗೋಡಿನ ಕೂಡ್ಲು ಗ್ರಾಮದ ಚೂರಿ ನಿವಾಸಿಗಳಾದ ಮೊಹಮ್ಮದ್‌ ಸಿ.ಎ. (61) ಹಾಗೂ ಕಮರುನ್ನೀಸಾ (41) ಬಂಧಿತ ಆರೋಪಿಗಳಾಗಿದ್ದು, ಪೊಲೀಸ್‌ ಕಾರ್ಯಾಚರಣೆ ವೇಳೆ ಆರೋಪಿ ಶರೀಫ್‌ ಪರಾರಿಯಾಗಿದ್ದಾನೆ. ಆರೋಪಿಗಳಿಂದ 500 ರೂ. ಮುಖಬೆಲೆಯ 46 ಖೋಟಾ ನೋಟುಗಳು, 5,300 ರೂ. ನಗದು ಹಾಗೂ 3 ಮೊಬೈಲ್‌ಗ‌ಳನ್ನು ವಶಪಡಿಕೊಳ್ಳಲಾಗಿದೆ.

ಬಿ.ಸಿ. ರೋಡಿನಲ್ಲಿ ಹೆದ್ದಾರಿ ಬದಿ ಕೇರಳ ನೋಂದಣಿಯ ಕಾರು ಅನುಮಾನಾಸ್ಪದ ರೀತಿಯಲ್ಲಿ ನಿಂತಿದ್ದು, ಬಂಟ್ವಾಳ ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ಹಾಗೂ ಸಿಬಂದಿ ಕಾರಿನ ಬಳಿ ತೆರಳಿದಾಗ ಕಾರಿನಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಿಸಿದ್ದು, ಅದರಲ್ಲಿ ಓರ್ವನನ್ನು ಬಂಧಿಸಲಾಗಿದೆ. ಜತೆಗೆ ಕಾರಿನಲ್ಲಿ ಓರ್ವ ಮಹಿಳೆ ಇದ್ದು, ಆಕೆಯನ್ನೂ ಬಂಧಿಸಿದ್ದಾರೆ.

ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅವರು ಖೋಟಾ ನೋಟುಗಳನ್ನು ತಂದು ತುಂಬೆ, ಬಿ.ಸಿ. ರೋಡು ಭಾಗದ ಸಣ್ಣ ಅಂಗಡಿಗಳಿಗೆ ತೆರಳಿ ವಿನಿಮಯ ಮಾಡುತ್ತಿರುವ ವಿಷಯವನ್ನು ಬಾಯ್ಬಿಟ್ಟಿದ್ದಾರೆ. ಕೇರಳದಿಂದ ಒಂದಷ್ಟು ನೋಟುಗಳನ್ನು ತಂದು ಇಲ್ಲಿನ ಫ್ಯಾನ್ಸಿ ಸಹಿತ ಸಣ್ಣ ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಕಡಿಮೆ ಬೆಲೆಯ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ನೀಡುತ್ತಿದ್ದರು.

ಬಳಿಕ ಅವರಿಂದ ಬಾಕಿ ಮೊತ್ತವನ್ನು ಪಡೆದು ಅಲ್ಲಿಂದ ಪರಾರಿಯಾಗುತ್ತಿದ್ದರು. ಹೀಗೆ ಹಲವು ಭಾಗಕ್ಕೆ ತೆರಳಿ ತಮ್ಮಲ್ಲಿರುವ ಖೋಟಾ ನೋಟುಗಳನ್ನು ಖಾಲಿ ಮಾಡಿ ಹಿಂದಿರುವ ಯೋಜನೆ ಅವರದ್ದಾಗಿತ್ತು. ಜತೆಗೆ ಇಲ್ಲಿ ಖರೀದಿಸಿದ ವಸ್ತುಗಳನ್ನು ಕೇರಳದ ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದರು. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

ವ್ಯವಸ್ಥಿತ ಜಾಲ?
ಇದೊಂದು ವ್ಯವಸ್ಥಿತ ಜಾಲ ಎಂಬ ಅನುಮಾನ ಹುಟ್ಟಿಕೊಂಡಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿಂದೆಯೂ ಇದೇ ರೀತಿಯ ಕೃತ್ಯಗಳು ನಡೆದಿವೆಯೇ, ಇದರ ಹಿಂದೆ ಯಾರೆಲ್ಲ ಇದ್ದಾರೆ, ಎಷ್ಟು ತಂಡಗಳು ಇದರ ಹಿಂದೆ ಕೆಲಸ ಮಾಡುತ್ತಿವೆ ಎಂಬ ಅನುಮಾನದಿಂದ ಹಲವು ಆಯಾಯಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next