ಹೊಸದಿಲ್ಲಿ: 2029ರಲ್ಲಿ ನಡೆಯಲಿರುವ ಮುಂದಿನ ಲೋಕಸಭಾ ಚುನಾಚಣೆಯು ಎಪ್ರಿಲ್ ಅಂತ್ಯದೊಳಗೆ ಮುಗಿಯಲಿದೆ ಎಂದು ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್ ಕುಮಾರ್ ಹೇಳಿದ್ದಾರೆ. ಕೆಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವ ಬಿಸಿಲ ಬೇಗೆಯ ಕಾರಣದಿಂದ ಜನರು ಮತ ಹಾಕಲು ನಿರುತ್ಸಾಹ ತೋರುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
2004ರವರೆಗೆ ಭಾರತದಲ್ಲಿ ಚಳಿಯ ತಿಂಗಳಲ್ಲಿ ಹೆಚ್ಚಾಗಿ ಲೋಕಸಭಾ ಚುನಾವಣೆ ನಡೆಯುತ್ತಿತ್ತು. ನೆವಂಬರ್- ಡಿಸೆಂಬರ್ ತಿಂಗಳಿನಲ್ಲಿ ಚುನಾವಣೆ ನಡೆಯುತ್ತಿತ್ತು.
ಮತ ಎಣಿಕೆಗೆ ಒಂದು ದಿನಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜೀವ್ ಕುಮಾರ್ ಅವರು, 2029 ರ ಸಾರ್ವತ್ರಿಕ ಚುನಾವಣೆಗಳು ಏಪ್ರಿಲ್ ಅಂತ್ಯದ ವೇಳೆಗೆ ಮುಗಿಯಲಿದೆ ಎಂದರು. ಚುನಾವಣೆಯ ಬಹುದೊಡ್ಡ ಪಾಠವೆಂದರೆ ಬೇಸಿಗೆಗೆ ಮುನ್ನವೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಇತ್ತೀಚಿನ ‘ಲಾಪತಾ ಲೇಡೀಸ್’ ಚಿತ್ರದಿಂದ ಸ್ಫೂರ್ತಿ ಪಡೆದ ಚುನಾವಣಾ ಆಯುಕ್ತರನ್ನು ‘ಲಾಪತಾ ಜಂಟಲ್‌ಮೆನ್’ ಎಂದು ಕರೆಯುವ ಸಾಮಾಜಿಕ ಮಾಧ್ಯಮದ ಮೀಮ್ ಗಳನ್ನು ಉಲ್ಲೇಖಿಸಿದ ರಾಜೀವ್ ಕುಮಾರ್, “ನಾವು ಯಾವಾಗಲೂ ಇಲ್ಲಿದ್ದೇವೆ, ಎಂದಿಗೂ ಕಾಣೆಯಾಗಲಿಲ್ಲ” ಎಂದು ಹೇಳಿದರು.
ಆದಷ್ಟು ಬೇಗ ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸುವುದಾಗಿ ರಾಜೀವ್ ಕುಮಾರ್ ಹೇಳಿದರು. ಮತದಾನದ ಪ್ರಮಾಣದಿಂದ ನಾವು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು.
2019 ರಲ್ಲಿ 3,500 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 2024 ರ ಚುನಾವಣೆಯಲ್ಲಿ ನಗದು, ಉಚಿತ ವಸ್ತುಗಳು, ಡ್ರಗ್ಸ್ ಮತ್ತು ಮದ್ಯ ಸೇರಿದಂತೆ 10,000 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಸಿಐ ಹೇಳಿದೆ.