ಮೈಸೂರು : 5
ವರ್ಷ ನಾನೇ ದಸರಾ ನಡೆಸಿದ್ದು,ಮುಂದಿನ 5 ವರ್ಷವೂ ದಸರಾವನ್ನು ನಾನೇ ನಡೆಸುತ್ತೇನೆ..ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವವಿಖ್ಯಾತ ನಾಡಹಬ್ಬ 407ನೇ ಮೈಸೂರು ದಸರಾದ ಮೊದಲ ದಿನದ ಸಮಾರಂಭದಲ್ಲಿ ವ್ಯಕ್ತಪಡಿಸಿದ ಮನದಾಳದ ಬಯಕೆ.
ಗುರುವಾರ ಬೆಳಗ್ಗೆ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ದಸರೆಗೆ ಚಾಲನೆ ನೀಡಿದ ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಮುಖ್ಯಮಂತ್ರಿಗಳು ಸ್ವಾರಸ್ಯಕರ ಭಾಷಣ ಮಾಡಿದರು.
‘ದಸರಾ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ನಮ್ಮ ನಾಡಿನ ಸಂಸ್ಕೃತಿಗೆ ಹಿಡಿದ ಕನ್ನಡಿ .ಇದನ್ನು ಕಣ್ತುಂಬಿಕೊಳ್ಳಲು ವಿದೇಶದಿಂದಲೂ ಪ್ರವಾಸಿಗರು ಬಂದು ಹಾಡಿ ಹೊಗಳುತ್ತಿರುವುದು ಹೆಮ್ಮೆಯ ವಿಚಾರ’ ಎಂದರು.
‘ನಾನೂ ಮೈಸೂರಿನವನೇ, ಚಿಕ್ಕವನಿದ್ದಾಗ ತಂದೆ ಹೆಗಲ ಮೇಲೆ ಕೂರಿಸಿ ದಸರಾ ತೊರಿಸುತ್ತಿದ್ದರು. ತಾಯಿಯ ಮಹಿಮೆ ಎಂತಹದ್ದು ಅಂದರೆ ಈಗ ನಾನೇ ದಸರಾ ನಡೆಸುತ್ತಿದ್ದೇನೆ. ತಾಯಿಯ ಕೃಪೆ ಇದೆ , ಹೀಗಾಗಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ’ ಎಂದು ಸಂತಸ ವ್ಯಕ್ತ ಪಡಿಸಿದರು.
‘ನಾನು ಹೊರಗಿನಿಂದ ಒರಟಾಗಿದ್ದರೂ ಒಳಗೆ ಮೃದು, ಆದರೆ ಕವಿ ನಿಸಾರ್ ಅಹಮದ್ ಅವರು ಹೊರಗೂ ಮೃದು ಒಳಗೂ ಮೃದು’ ಎಂದರು.
ಇದೇ ವೇಳೆ ಮುಂದಿನ ದಸರಾ ವಿಚಾರ ಪ್ರಸ್ತಾವಿಸಿ ‘5 ವರ್ಷ ನಾನೇ ದಸರಾ ನಡೆಸಿದ್ದು, ಮುಂದಿನ 5 ವರ್ಷವೂ ನಡೆಸುತ್ತೇನೆ. ಹಿರಿಯ ನಾಯಕರಾದ ಜಿ.ಟಿ.ದೇವೇಗೌಡರೂ ನನಗೆ ಶುಭ ಕೋರಿದ್ದಾರೆ. ನೀನೂ ಕೂಡ ವಿಶ್ ಮಾಡು’ ಎಂದು ವೇದಿಕೆಯಲ್ಲಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹರನ್ನು ಕಿಚಾಯಿಸಿದರು.