Advertisement

ಕೊನೆಯ ಓವರ್‌ನಲ್ಲಿ ಭಾರತಕ್ಕೆ ನಿರಾಸೆ

01:58 AM Feb 11, 2019 | |

ಹ್ಯಾಮಿಲ್ಟನ್‌: ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್‌ನ‌ಲ್ಲಿ ಟಿ20 ಸರಣಿ ಗೆಲ್ಲುವ ಉಮೇದಿನಲ್ಲಿದ್ದ ಭಾರತ ಕ್ರಿಕೆಟ್ ತಂಡಕ್ಕೆ ನಿರಾಸೆಯಾಗಿದೆ. 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಕೇವಲ ನಾಲ್ಕೇ ರನ್‌ಗಳಿಂದ ಸೋತು ಹೋಗಿ ಆಘಾತ ಅನುಭವಿಸಿದೆ. ನ್ಯೂಜಿಲೆಂಡ್‌ 2-1 ಅಂತರದಿಂದ ಸರಣಿ ಗೆದ್ದು ನಿಟ್ಟುಸಿರುಬಿಟ್ಟಿದೆ. ಇತ್ತೀಚೆಗೆ ಸತತವಾಗಿ ಸರಣಿಗಳ ಮೇಲೆ ಸರಣಿ ಗೆಲ್ಲುತ್ತ ಐತಿಹಾಸಿಕ ಸಾಧನೆ ಮಾಡಿದ್ದ ಭಾರತ, ಇಲ್ಲೂ ಗೆದ್ದಿದ್ದರೆ ಮತ್ತೂಂದು ಇತಿಹಾಸ ನಿರ್ಮಾಣವಾಗುತ್ತಿತ್ತು. ಅದನ್ನು ಸಮೀಪದಲ್ಲಿ ತಪ್ಪಿಸಿಕೊಂಡಿದೆ.

Advertisement

ಹ್ಯಾಮಿಲ್ಟನ್‌ನಲ್ಲಿ ನಡೆದ ಈ ಬೃಹತ್‌ ಮೊತ್ತದ ಹಣಾಹಣಿ ಕೊನೆಯ ಕ್ಷಣದ ತನಕ ರೋಚಕ ಹೋರಾಟ ಕಂಡಿತು. ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 212 ರನ್‌ ರಾಶಿ ಹಾಕಿದರೆ, ಭಾರತ 20 ಓವರ್‌ಗಳಲ್ಲಿ 6 ವಿಕೆಟಿಗೆ 208 ರನ್‌ ಮಾತ್ರ ಗಳಿಸಿತು. ಇದರೊಂದಿಗೆ ವಿಲಿಯಮ್ಸನ್‌ ಪಡೆ ಏಕದಿನ ಸರಣಿಯಲ್ಲಿ ಅನುಭವಿಸಿದ 1-4 ಅಂತರದ ಭಾರೀ ಸೋಲಿಗೆ ಸೇಡು ತೀರಿಸಿಕೊಂಡಿತು. ಏಕೈಕ ಏಕದಿನ ಪಂದ್ಯದ ಗೆಲುವಿಗೆ ಸಾಕ್ಷಿಯಾದ ಹ್ಯಾಮಿಲ್ಟನ್‌ ಅಂಗಳದಲ್ಲೇ ಕಿವೀಸ್‌ ಟಿ20 ಸರಣಿ ವಶಪಡಿಸಿಕೊಂಡದ್ದೊಂದು ವಿಶೇಷ.

ಕೃಣಾಲ್‌-ಕಾರ್ತಿಕ್‌ ಹೋರಾಟ: ಈ ಪಂದ್ಯವನ್ನು ಇನ್ನೂ ದೊಡ್ಡ ಅಂತರದಿಂದ ಕಳೆದುಕೊಳ್ಳುವ ಭೀತಿ ಭಾರತಕ್ಕೆ ಎದುರಾಗಿತ್ತು. ಆದರೆ ಅಂತಿಮ 4 ಓವರ್‌ಗಳಲ್ಲಿ ಕೃಣಾಲ್‌ ಪಾಂಡ್ಯ-ದಿನೇಶ್‌ ಕಾರ್ತಿಕ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿ ತಂಡದ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದರು. ಈ ಜೋಡಿಯಿಂದ 4.4 ಓವರ್‌ಗಳಲ್ಲಿ 63 ರನ್‌ ಬಂತು.

ಅಂತಿಮ 2 ಓವರ್‌ಗಳಲ್ಲಿ 30 ರನ್‌ ತೆಗೆಯುವ ಒತ್ತಡ ಭಾರತದ ಮೇಲಿತ್ತು. ಪಾಂಡ್ಯ ಪರಾಕ್ರಮದಿಂದ 18ನೇ ಓವರಿನಲ್ಲಿ 18 ರನ್‌ ಸಿಡಿದುದರಿಂದ ಪಂದ್ಯ ತುದಿಗಾಲಲ್ಲಿ ನಿಲ್ಲಿಸಿತ್ತು. 19ನೇ ಓವರಿನಲ್ಲಿ 14 ರನ್‌ ಬಂತು. ಅಂತಿಮ ಓವರಿನಲ್ಲಿ 16 ರನ್‌ ಸವಾಲು ಎದುರಾಯಿತು. ಬಂದದ್ದು 11 ರನ್‌ ಮಾತ್ರ. ವೈಡ್‌ ಆದ ಕೊನೆಯ ಎಸೆತ, ಬಳಿಕ ಕಾರ್ತಿಕ್‌ ಬ್ಯಾಟಿನಿಂದ ಕವರ್‌ ಮೂಲಕ ಸಿಕ್ಸರ್‌ಗೆ ರವಾನೆಗೊಂಡಿತು.

ದಿನೇಶ್‌ ಕಾರ್ತಿಕ್‌ 16 ಎಸೆತಗಳಿಂದ 33 ರನ್‌ (4 ಸಿಕ್ಸರ್‌), ಕೃಣಾಲ್‌ ಪಾಂಡ್ಯ 13 ಎಸೆತಗಳಿಂದ 26 ರನ್‌ ಬಾರಿಸಿ ಅಜೇಯರಾಗಿ ಉಳಿದರು (2 ಬೌಂಡರಿ, 2 ಸಿಕ್ಸರ್‌). ಧವನ್‌, ಧೋನಿ ಹೊರತುಪಡಿಸಿ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಉಳಿದವರೆಲ್ಲ ಮಿಂಚಿದ್ದರು. ರೋಹಿತ್‌ 32 ಎಸೆತಗಳಿಂದ 38 (3 ಬೌಂಡರಿ), ವಿಜಯ್‌ ಶಂಕರ್‌ 28 ಎಸೆತಗಳಿಂದ 43 (5 ಬೌಂಡರಿ, 2 ಸಿಕ್ಸರ್‌), ರಿಷಭ್‌ ಪಂತ್‌ 12 ಎಸೆತಗಳಿಂದ 28 (1 ಬೌಂಡರಿ, 3 ಸಿಕ್ಸರ್‌) ಮತ್ತು ಹಾರ್ದಿಕ್‌ ಪಾಂಡ್ಯ 11 ಎಸೆತಗಳಿಂದ 21 ರನ್‌ ಹೊಡೆದು (1 ಬೌಂಡರಿ, 2 ಸಿಕ್ಸರ್‌) ಭಾರತದ ಹೋರಾಟವನ್ನು ಜಾರಿಯಲ್ಲಿರಿಸಿದ್ದರು.

Advertisement

ಕಿವೀಸ್‌ ಪ್ರಚಂಡ ಆರಂಭ: ನ್ಯೂಜಿಲೆಂಡಿನ ಬೃಹತ್‌ ಮೊತ್ತಕ್ಕೆ ಕಾರಣರಾದವರು ಆರಂಭಿಕರಾದ ಮನ್ರೊ ಮತ್ತು ಸೀಫ‌ರ್ಟ್‌. ಇವರಿಬ್ಬರು 7.4 ಓವರ್‌ಗಳಲ್ಲಿ 80 ರನ್‌ ರಾಶಿ ಹಾಕಿದರು. ಮನ್ರೊ 40 ಎಸೆತಗಳಿಂದ 72 ರನ್‌ ಬಾರಿಸಿ ಭಾರತಕ್ಕೆ ಸವಾಲಾದರು. ಈ ಪಂದ್ಯಶ್ರೇಷ್ಠ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌, 5 ಫೋರ್‌ ಒಳಗೊಂಡಿತ್ತು. ಸೀಫ‌ರ್ಟ್‌ 3 ಸಿಕ್ಸರ್‌, 3 ಬೌಂಡರಿ ನೆರವಿನಿಂದ 43 ರನ್‌ ಬಾರಿಸಿದರು.

ಭಾರತದ ಸೋಲಿಗೆ ಕಾರಣವೇನು?

1 ಟಿ20ಯಲ್ಲಿ ಮಾಮೂಲಿಯಾಗಿ ಸ್ಫೋಟಕ ಬ್ಯಾಟಿಂಗ್‌ ನಡೆಸುವ ರೋಹಿತ್‌ ಶರ್ಮ, ಭಾನುವಾರ ನಿಧಾನಗತಿಯಲ್ಲಿ ಆಡಿದರು. ಅವರ ಸಾಧನೆ 32 ಎಸೆತಕ್ಕೆ 38 ರನ್‌.

2 ಅಂತಿಮ ಓವರ್‌ನ 2ನೇ ಎಸೆತ ವೈಡ್‌ ಎನ್ನುವುದು ಖಚಿತವಾಗಿತ್ತು. ಆದರೆ ಅಂಪೈರ್‌ ಅದನ್ನು ನಿರಾಕರಿಸುವ ಮೂಲಕ ಭಾರತಕ್ಕೆ ಗದಾಪ್ರಹಾರ ಮಾಡಿದರು.

3 ಅಂತಿಮ ಓವರ್‌ನ 3ನೇ ಎಸೆತದಲ್ಲಿ ಕಾರ್ತಿಕ್‌ 1 ರನ್‌ ಓಡದೇ, ಸಹ ಬ್ಯಾಟ್ಸ್‌ ಮನ್‌ ಕೃಣಾಲ್‌ರನ್ನು ಹಿಂದಕ್ಕೆ ಕಳಿಸಿದರು. ಇದು ಭಾರತದ ಅವಕಾಶವನ್ನು ಬಹುತೇಕ ಕಠಿಣಗೊಳಿಸಿತು.

ಧೋನಿ ಕೈಚಳಕಕ್ಕೆ ಕ್ರಿಕೆಟ್ ಜಗತ್ತು ನಿಬ್ಬೆರಗು

ಭಾರತ ಕ್ರಿಕೆಟ್ ತಂಡದ ಹಿರಿಯಣ್ಣ ಮಹೇಂದ್ರ ಸಿಂಗ್‌ ಧೋನಿ ಭಾನುವಾರ ಮತ್ತೂಂದು ಮೈಲುಗಲ್ಲು ನೆಟ್ಟರು. ನ್ಯೂಜಿಲೆಂಡ್‌ ವಿರುದ್ಧದ ಹ್ಯಾಮಿಲ್ಟನ್‌ ಪಂದ್ಯ ಅವರ 300ನೇ ಟಿ20 ಪಂದ್ಯವಾಗಿತ್ತು. ಧೋನಿ ಈ ಸಾಧನೆಗೈದ ಭಾರತದ ಮೊದಲ ಕ್ರಿಕೆಟಿಗ. ಈ 300 ಪಂದ್ಯಗಳಲ್ಲಿ 96 ಪಂದ್ಯಗಳನ್ನು ಧೋನಿ ಭಾರತದ ಪರ ಆಡಿದರೆ, ಉಳಿದ ಪಂದ್ಯಗಳನ್ನು ಐಪಿಎಲ್‌ ಮತ್ತು ಚಾಂಪಿಯನ್ಸ್‌ ಲೀಗ್‌ ಟೂರ್ನಿಗಳಲ್ಲಿ ಆಡಿದ್ದರು. 3ನೇ ಪಂದ್ಯದ ವೇಳೆ ಭಾರತದ ರಾಷ್ಟ್ರಧ್ವಜ ಹಿಡಿದುಕೊಂಡಿದ್ದ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ, ಧೋನಿ ಪಾದ ಸ್ಪರ್ಶಿಸಲು ಯತ್ನಿಸಿದರು. ಈ ವೇಳೆ ಧ್ವಜ ನೆಲಕ್ಕೆ ತಾಗುವುದರಲ್ಲಿತ್ತು. ಅದನ್ನು ಕಂಡ ಧೋನಿ ತಕ್ಷಣ, ಅಭಿಮಾನಿ ಕೈಯಿಂದ ಧ್ವಜ ತೆಗೆದುಕೊಂಡರು. ಇದು ಎಲ್ಲರ ಗಮನ ಸೆಳೆಯಿತು. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ, ವಿಕೆಟ್ ಹಿಂದುಗಡೆ ಮತ್ತೂಮ್ಮೆ ಜಾದೂ ಮಾಡಿದ್ದಾರೆ. ಅವರ ಮಿಂಚಿನ ಕೈಚಳಕದ ಪರಿಣಾಮ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಟಿಮ್‌ ಸೀಫ‌ರ್ಟ್‌ ಔಟಾಗಿ ಹೊರ ನಡೆದರು. ಕುಲದೀಪ್‌ ಎಸೆತದಲ್ಲಿ ಸೀಫ‌ರ್ಟ್‌ ಸ್ವಲ್ಪವಷ್ಟೇ ಕಾಲನ್ನು ಮುಂದಿಟ್ಟಿದ್ದರು. ಅಷ್ಟರಲ್ಲೇ, ಒಂದು ಸೆಕೆಂಡ್‌ಗೂ ಕಡಿಮೆ ಅವಧಿಯಲ್ಲಿ ಅಂದರೆ 0.099 ಸೆಕೆಂಡ್‌ನ‌ಲ್ಲಿ ಧೋನಿ ಸ್ಟಂಪ್‌ ಮಾಡಿಯಾಗಿತ್ತು. ಹಿಂದಿನ ಕೆಲವು ಪಂದ್ಯದಲ್ಲೂ ಧೋನಿಯ ಅದ್ಭುತ ಕೈಚಳಕ ಕೆಲಸ ಮಾಡಿತ್ತು. ಇದೀಗ ಮತ್ತೂಮ್ಮೆ ಅವರ ಕೈಚಳಕ ನೋಡಿ, ಕ್ರಿಕೆಟ್ ಜಗತ್ತು ನಿಬ್ಬೆರಗಾಗಿತ್ತು.

300 ಟಿ20: ಧೋನಿ ಮೊದಲ ಭಾರತೀಯ

ರಾಷ್ಟ್ರಧ್ವಜ ನೆಲ ಮುಟ್ಟುವುದನ್ನು ತಡೆದ ಧೋನಿ

30 ತಿಂಗಳ ನಂತರ ಟಿ20 ಸರಣಿ ಸೋಲು

ಭಾರತ ಟಿ20 ತಂಡ 30 ತಿಂಗಳ ನಂತರ ಸರಣಿ ಸೋಲು ಅನುಭವಿಸಿದೆ. 2017ರ ಜನವರಿ ನಂತರ ಸತತ 10 ಟಿ20 ಸರಣಿಯನ್ನು ಗೆದ್ದಿದ್ದ ಭಾರತ, ನ್ಯೂಜಿಲೆಂಡ್‌ ವಿರುದ್ಧ ಸೋಲೊಪ್ಪಿಕೊಂಡಿದೆ. ವರ್ಷದ ಲೆಕ್ಕಾಚಾರದಲ್ಲಿ ಎರಡೂವರೆ ವರ್ಷದ ನಂತರ ಭಾರತ ಟಿ20 ಸರಣಿ ಕಳೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next