ಕ್ರೈಸ್ಟ್ ಚರ್ಚ್: ಆತಿಥೇಯ ಕಿವೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನೂ ಸೋತ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲೂ ಕ್ಲೀನ್ ಸ್ವೀಪ್ ಅವಮಾನಕ್ಕೆ ಒಳಗಾಗಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸೋಲನುಭವಿಸಿತು.
ಗೆಲುವಿಗೆ 132 ರನ್ ಗುರಿ ಪಡೆದ ನ್ಯೂಜಿಲ್ಯಾಂಡ್ ಕೇವಲ ಮೂರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಇದರೊಂದಿಗೆ ಭರ್ಜರಿ ಏಳು ವಿಕೆಟ್ ಗಳಿಂದ ವಿಜಯಿಯಾಯಿತು.
ಎರಡನೇ ದಿನದ ಅಂತ್ಯದಲ್ಲಿ ಆರು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದ್ದ ಭಾರತ ಇಂದು 124 ರನ್ ಗೆ ಆಲ್ ಔಟ್ ಆಯಿತು. ವಿಹಾರಿ (9 ರನ್) ಪಂತ್ (4) ಬೇಗನೇ ಔಟಾದರು. ಜಡೇಜಾ 16 ರನ್ ಗಳಿಸಿ ಅಜೇಯರಾಗುಳಿದರು. ಕಿವೀಸ್ ಪರ ಬೌಲ್ಟ್ ನಾಲ್ಕು ವಿಕೆಟ್, ಸೌಥಿ ಮೂರು ವಿಕೆಟ್ ಪಡೆದರು.
ಸುಲಭ ಗುರಿ ಪಡೆದ ಕಿವೀಸ್ ಗೆ ಆರಂಭಿಕರು ಉತ್ತಮ ಬುನಾದಿ ಹಾಕಿದರು. ಟಾಮ್ ಲ್ಯಾಂಥಮ್ 52 ರನ್ ಮತ್ತು ಟಾಮ್ ಬ್ಲಂಡೆಲ್ 55 ರನ್ ಗಳಿಸಿದರು. ಅಂತಿಮವಾಗಿ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಎರಡು ವಿಕೆಟ್ ಬುಮ್ರಾ ಪಡೆದರೆ, ಒಂದು ವಿಕೆಟ್ ಯಾದವ್ ಪಾಲಾಯಿತು.
2011-12 ಬಳಿಕ ಮೊದಲ ಬಾರಿಗೆ ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ವೈಟ್ ವಾಶ್ ಅವಮಾನಕ್ಕೆ ಒಳಗಾಗಿದೆ. 5 ಪಂದ್ಯಗಳ ಟಿಟ್ವೆಂಟಿ ಸರಣಿಯನ್ನು 5-0 ಅಂತರದಿಂಧ ಗೆದ್ದಿದ್ದ ಭಾರತ ನಂತರ ಏಕದಿನ ಸರಣಿಯನ್ನು 3-0 ಅಂತರದಿಂದ ಸೋಲನುಭವಿಸಿದೆ.
ಕೈಲ್ ಜ್ಯಾಮಿಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಟಿಮ್ ಸೌಥಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.