Advertisement

ನ್ಯೂಯಾರ್ಕ್‌ ಟೈಮ್ಸ್‌ ವಿಶಿಷ್ಟ ಶ್ರದ್ಧಾಂಜಲಿ : ಮುಖಪುಟದಲ್ಲಿ 1,000 ಕೋವಿಡ್‌ ಸಾವಿನ ವಿವರ

03:22 PM May 25, 2020 | sudhir |

ನ್ಯೂಯಾರ್ಕ್‌: ಅಮೆರಿಕದಲ್ಲಿ ಕೋವಿಡ್‌-19ಕ್ಕೆ ಬಲಿಯಾದವರ ಸಂಖ್ಯೆ 1,00,000ದ ಸನಿಹವನ್ನು ತಲಪುತ್ತಿರುವಂತೆಯೇ “ದ ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಸೋಂಕಿಗೆ ಬಲಿಯಾದ 1,000 ಅಮೇರಿಕನ್ನರ ಕಿರುವಿವರಗಳನ್ನು ರವಿವಾರದ ತನ್ನ ಸಂಚಿಕೆಯ ಮುಖಪುಟದಲ್ಲಿ ಪ್ರಕಟಿಸಿ ಅವರಿಗೆ ವಿಶಿಷ್ಟ ರೀತಿ ಶ್ರದ್ಧಾಂಜಲಿ ಸಲ್ಲಿಸಿದೆ.

Advertisement

ದುರಂತದ ವೈಶಾಲ್ಯ ಮತ್ತು ವೈವಿಧ್ಯತೆಯನ್ನು ತಿಳಿಯಪಡಿಸುವ ಉದ್ದೇಶದಿಂದ ತಾನು ಈ ನಿರ್ಧಾರ ಕೈಗೊಂಡದ್ದಾಗಿ ಪತ್ರಿಕೆ ತಿಳಿಸಿದೆ. “1,00,000 ಸನಿಹ ತಲಪಿರುವ ಅಮೆರಿಕದ ಸಾವಿನ ಸಂಖ್ಯೆ, ಒಂದು ಭರಿಸಲಾದ ನಷ್ಟ’ ಎಂಬ ಶೀರ್ಷಿಕೆಯನ್ನು ಹಾಗೂ “ಇವು ಕೇವಲ ಹೆಸರುಗಳಲ್ಲ.

ಇವರು ನಮ್ಮವರೇ ಆಗಿದ್ದರು’ ಎಂಬ ಉಪಶೀರ್ಷಿಕೆಯನ್ನು ಪತ್ರಿಕೆ ಹೊತ್ತುಬಂದಿದೆ. ಕೋವಿಡ್‌ಗೆ ಬಲಿಯಾದ 1,000 ಮಂದಿಯ ವಿವರವನ್ನು ಒಳಪುಟದಲ್ಲಿ ಮುಂದುವರಿಸಲಾಗಿದೆ.

ಅಮೆರಿಕದಲ್ಲಿ ಕೋವಿಡ್‌-19ರಿಂದ ಮೃತಪಟ್ಟವರ ಸಂಖ್ಯೆ 97,000 ಗಡಿಯನ್ನು ದಾಟಿರುವುದಾಗಿ ಜಾನ್ಸ್‌ ಹಾಪ್‌ಕಿನ್ಸ್‌ ಯೂನಿವರ್ಸಿಟಿ ಟ್ರ್ಯಾಕರ್‌ ತಿಳಿಸಿದೆ. ಸಾವಿನ ಸಂಖ್ಯೆ ನಿರೀಕ್ಷಿತ 1,00,000ದ ಗಡಿಯನ್ನು ತಲಪಿದಾಗ ಅದನ್ನು ಹೇಗೆ ದಾಖಲಿಸುವುದೆಂದು ತಾನು ಯೋಚಿಸುತ್ತಿರುವುದಾಗಿ ಪತ್ರಿಕೆ ಹೇಳಿದೆ.

ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯ ನಿರಂತರ ವರದಿಯಿಂದ ಓದುಗರು ಹಾಗೂ ಪತ್ರಿಕೆಯ ಸಿಬಂದಿವರ್ಗ ಬಳಲಿದ್ದಾರೆ. ಹಾಗಾಗಿ ದುರಂತವನ್ನು ವೈಯಕ್ತಿಕ ನೆಲೆಯಲ್ಲಿ ಬಿಂಬಿಸುವ ಯತ್ನವಾಗಿ ಪತ್ರಿಕೆ ಈ ಕ್ರಮ ಅನುಸರಿಸಿರುವುದಾಗಿ ಸಹಾಯಕ ಗ್ರಾಫಿಕ್ಸ್‌ ಸಂಪಾದಕ ಸೈಮನ್‌ ಲ್ಯಾಂಡನ್‌ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಹೇಳಿದ್ದಾರೆ.

Advertisement

ಕೋವಿಡ್‌-19ಕ್ಕೆ ಬಲಿಯಾದವರಿಗೆ ಸಂಬಂಧಿಸಿ ಅಮೆರಿಕದ ನೂರಾರು ಪತ್ರಿಕೆಯಲ್ಲಿ ಪ್ರಕಟವಾದ ಶ್ರದ್ಧಾಂಜಲಿಗಳನ್ನು ಕಲೆ ಹಾಕುವಲ್ಲಿ ಮತ್ತು ಅವರ ಹೆಸರು ಹಾಗೂ ಪ್ರಮುಖ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವಲ್ಲಿ ಲ್ಯಾಂಡನ್‌ ನೇತೃತ್ವದ ತಂಡ ಕೆಲಸ ಮಾಡಿತ್ತು.

ಫೋಟೋ ಇಲ್ಲದ ಮುಖಪುಟ
ಪತ್ರಿಕೆಯಲ್ಲಿ ತನ್ನ 40 ವರ್ಷಗಳ ವೃತ್ತಿಜೀವನದಲ್ಲಿ ಮುಖಪುಟವೊಂದು ಯಾವುದೇ ಫೋಟೋ ಇಲ್ಲದೆ ಪ್ರಕಟಗೊಂಡದ್ದು ತನಗೆ ನೆನಪಿಲ್ಲ. ಇದು ಖಂಡಿತಕ್ಕೂ ಆಧುನಿಕ ಕಾಲದಲ್ಲಿ ಒಂದು ಪ್ರಥಮವಾಗಿದೆ ಎಂದು ಪತ್ರಿಕೆಯ ಮುಖ್ಯ ಕ್ರಿಯೇಟಿವ್‌ ಆಫೀಸರ್‌ ಟಾಮ್‌ ಬೊಡ್ಕಿನ್‌ ಹೇಳಿದ್ದಾರೆ.

ಪತ್ರಿಕೆ ಶನಿವಾರ ಅಪರಾಹ್ನ ತನ್ನ ಮುಖಪುಟದ ಬಿಂಬವೊಂದನ್ನು ಟ್ವೀಟ್‌ ಮಾಡಿತ್ತು ಮತ್ತು ಕೆಲವೇ ತಾಸುಗಳಲ್ಲಿ 61,000 ರಿಟ್ವೀಟ್‌ಗಳು ಹಾಗೂ 1,16,000ಕ್ಕಿಂತ ಅಧಿಕ ಲೈಕ್‌ಗಳು ವ್ಯಕ್ತವಾಗಿದ್ದವು.

ಸೋಮವಾರ ಅಮೆರಿಕದಲ್ಲಿ ಸ್ಮಾರಕ ದಿನವಾಗಿದ್ದು ಅಮೆರಿಕ ಬೇಸಗೆಯ ಪರಂಪರಾಗತ ಆರಂಭವೂ ಆಗಿದೆ. ಹೆಚ್ಚು ಬೆಚ್ಚನೆಯ ವಾತಾವರಣದ ಮರಳುವಿಕೆ ಮತ್ತು ದೇಶಾದ್ಯಂತ ಲಾಕ್‌ಡೌನ್‌ ನಿಯಮಗಳ ಸಡಿಲಿಕೆ ಮಾರಕ ಕೋವಿಡ್‌ನ‌ ಎರಡನೆ ಅಲೆಗೆ ಕಾರಣವಾಗಬಹುದೆಂದು ಕೆಲ ತಜ್ಞರು ಭೀತಿಪಟ್ಟಿದ್ದಾರೆ.

ನಿರ್ಬಂಧಗಳನ್ನು ಸಡಿಲಿಸಿದಂತೆಯೇ ಸ್ಥಳೀಯವಾಗಿ ಹೊಸ ಸೋಂಕು ಪ್ರದೇಶಗಳು ಉದ್ಭವವಾಗುವುದನ್ನು ತಡೆಯಲು ಸಾಧ್ಯವಿಲ್ಲ. ಕೋವಿಡ್‌ ನಿಯಂತ್ರಣದ ಪ್ರಮುಖ ಅಂಶಗಳಾದ ತಪಾಸಣೆ, ಕ್ವಾರಂಟೈನ್‌ ಹಾಗೂ ಸೋಂಕು ಪ್ರಸರಣ ಪತ್ತೆ ಕ್ರಮಗಳನ್ನು ಪಾಲಿಸಿದಲ್ಲಿ ಸೋಂಕಿನ ದ್ವಿತೀಯ ಅಲೆಯನ್ನು ತಡೆಗಟ್ಟಬಹುದಾಗಿದೆ ಎಂದು ಶ್ವೇತಭವನದ ಕೋವಿಡ್‌ ಕಾರ್ಯಪಡೆಯ ಸದಸ್ಯ ಡಾ| ಆ್ಯಂಟನಿ ಫಾಸಿ ಹೇಳಿದ್ದಾರೆ.

ಕೇವಲ 9 ರಾಜ್ಯಗಳು ಶಿಫಾರಸು ಮಾಡಲಾಗಿರುವ ಕನಿಷ್ಠ ತಪಾಸಣೆಗಳನ್ನು ನಡೆಸುತ್ತಿವೆಯೆಂದು ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನವೊಂದು ತಿಳಿಸಿದ್ದರೂ ಅಮೆರಿಕ ಸಂಭಾವ್ಯ ಎರಡನೇ ಅಲೆಯನ್ನು ಎದುರಿಸುವುದಕ್ಕೆ ಸಿದ್ಧವಾಗಿರುವುದೆಂದು ತಾನು ಹಾರೈಸುವುದಾಗಿ ಫಾಸಿ ಹೇಳಿದರು.

ಫಾಸಿ ಅವರು ಈ ಹೇಳಿಕೆ ನೀಡಿದ ಕೆಲವೇ ತಾಸುಗಳಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆರೋಗ್ಯ ಮಾರ್ಗದರ್ಶಿ ಸೂತ್ರಗಳನ್ನು ಅವಗಣಿಸಿ ಪ್ರಾರ್ಥನಾ ಮಂದಿ ರಗಳನ್ನು ವಾರಾಂತ್ಯದ ಪ್ರಾರ್ಥನೆಗೆ ತೆರೆಯುವಂತೆ ಆದೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next