Advertisement

ನ್ಯೂಯಾರ್ಕ್ ‌ನಲ್ಲಿ ಹೊಸ ಕೋವಿಡ್ ಪ್ರಕರಣ ಕಡಿಮೆ

05:13 PM Jun 07, 2020 | sudhir |

ನ್ಯೂಯಾರ್ಕ್‌: ಅಮೆರಿಕದಲ್ಲಿ ಕೋವಿಡ್‌ ಪ್ರಕರಣಗಳ ಕೇಂದ್ರ ವಲಯವಾಗಿದ್ದ ನ್ಯೂಯಾರ್ಕ್‌ ರಾಜ್ಯದಲ್ಲೀಗ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ಇದೇ ಮೊದಲ ಬಾರಿಗೆ ಇಲ್ಲಿ ಕಡಿಮೆ ಸಂಖ್ಯೆಯ ಅಂದರೆ 42 ಸಾವುಗಳು ವರದಿಯಾಗಿದ್ದು, 2728 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಕೋವಿಡ್‌ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇಲ್ಲಿ ಒಂದು ದಿನದಲ್ಲಿ 18825 ಪ್ರಕರಣಗಳು ವರದಿಯಾಗಿದ್ದು, ಸಾವಿನ ಪ್ರಮಾಣವೂ 800ರ ಮೇಲಿತ್ತು. ಆದರೆ ಗುರುವಾರದಿಂದೀಚೆಗೆ ಇದರ ಪ್ರಮಾಣ ಕಡಿಮೆಯಾಗಿದೆ.

ಕೋವಿಡ್‌ ಹರಡುವ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದಕ್ಕೆ ಕಾರಣ ಎಚ್ಚೆತ್ತ ಪ್ರಜೆಗಳು. ಅವರು ಸೂಕ್ತ ಸುರಕ್ಷತೆ ಮತ್ತು ಸಾಮಾಜಿಕ ಅಂತರ ಪಾಲಿಸುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದು ನ್ಯೂಯಾರ್ಕ್‌ನ ಗವರ್ನರ್‌ ಆಂಡ್ರೂ ಕೋಮೋ ಹೆಳಿದ್ದಾರೆ. ಜತೆಗೆ ಇತ್ತೀಚಿನ ದಿನಗಳಲ್ಲಿ ಜನರ ವರ್ತನೆಗಳು ಮಹತ್ತರವಾಗಿ ಬದಲಾವಣೆಯಾಗಿದ್ದು, ಕೋವಿಡ್‌ ಹರಡದಂತೆ ತಡೆಯಲು ಕಾರಣವಾಗಿದೆ. ಇಂದಿನ ಈ ಕಡಿಮೆ ಸಂಖ್ಯೆಯು ನಾವು ಬದಲಾಗಲು ಸಾಧ್ಯವಿದೆ ಮತ್ತು ಒಂದಾಗಿ ನಡೆದಲ್ಲಿ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಈವರೆಗೆ 3.76 ಲಕ್ಷಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಮೇ ತಿಂಗಳಿಂದ ಈವರೆಗೆ 100 ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾದ ಉದಾಹರಣೆಯೇ ಇರಲಿಲ್ಲ. ಜತೆಗೆ 20 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಇದೇ ವೇಳೆ ಜೂ.8ರಿಂದ ನ್ಯೂಯಾರ್ಕ್‌ನ ವ್ಯಾಪಾರ ವಹಿವಾಟುಗಳು ಸಹಜ ಸ್ಥಿತಿಗೆ ಬರಲಿದೆ ಎನ್ನಲಾಗಿದೆ. ಸುಮಾರು 40 ಲಕ್ಷ ಮಂದಿ ಮತ್ತೆ ಕೆಲಸಕ್ಕೆ ತೆರಳಲಿದ್ದಾರೆ.

Advertisement

ಮಾರ್ಚ್‌ ಮಧ್ಯಭಾಗದ ನಂತರದಿಂದ ಇಲ್ಲಿ ಲಾಕ್‌ ಡೌನ್‌ ಅನ್ನು ಹೇರಲಾಗಿತ್ತು. ಇನ್ನು ನ್ಯೂಯಾರ್ಕ್‌ ಹೊರವಲಯದಲ್ಲಿ ಈಗಾಗಲೇ ಚಟುವಟಿಕೆಗಳು ಅಲ್ಪ ಪ್ರಮಾಣದಲ್ಲಿ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next