ದಿನಪತ್ರಿಕೆಗಳು, ನಿಯತಕಾಲಿಕ ಗಳು ನಾಗರಿಕ ಜಗತ್ತಿನ ಅವಿಭಾಜ್ಯ ಅಂಗ. ಹೊಣೆಗಾರಿಕೆಯ ಪ್ರತೀಕ. ಸೇವೆಯ ದ್ಯೋತಕ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇವತ್ತಿನ ಕೊರೊನಾ ಆಪತ್ತಿನ ತನಕ ಜನರಿಗೆ ಅಗತ್ಯ-ಅಧಿಕೃತ ಸುದ್ದಿ ಮುಟ್ಟಿಸುವಲ್ಲಿ ದಿನಪತ್ರಿಕೆ ಗಳು ಮಹತ್ವದ ಪಾತ್ರ ವಹಿಸಿವೆ. ಅರುವತ್ತರ ದಶಕದಲ್ಲಿ ಹರಡಿದ ಪ್ಲೇಗ್ ಮಹಾಮಾರಿ, ಮಾರಣಾಂತಿಕ ಎಬೋಲಾ ಇತ್ಯಾದಿ ಕಾಯಿಲೆಗಳಿಂದ ಹಿಡಿದು ಈ ವರೆಗೆ ಹತ್ತುಹಲವು ಸವಾಲು, ಸಂಕಷ್ಟಗಳನ್ನು ಎದುರಿಸಿ ಗೆದ್ದಿವೆ. ಈಗಲೂ ನಾವು ಅಂಥದ್ದೇ ಗಟ್ಟಿ ಸಂಕಲ್ಪ ಮಾಡಿ ಅಂತಿಮ ಗೆಲುವಿನ ಕಡೆ ದಾಪುಗಾಲಿಡುವ ತೀರ್ಮಾನ ಮಾಡಬೇಕಿದೆ.
Advertisement
ನಾಳಿನ ಒಳಿತಿಗಾಗಿ ಇಡೀ ದೇಶವೇ ರವಿವಾರ ಜನತಾ ಕರ್ಫ್ಯೂಗೆ ಓಗೊಟ್ಟಿದೆ. ಇನ್ನೂ ಹತ್ತು ದಿನಗಳ ಕಾಲ ಕಠಿನ ನಿರ್ಬಂಧ ಮುಂದುವರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ನಮ್ಮ ಜೀವರಕ್ಷಣೆ ಮತ್ತು ದೇಶದ ಹಿತರಕ್ಷಣೆಗಾಗಿ ಇದೊಂದು ತುರ್ತು ಸಂದರ್ಭವೆಂದು ಭಾವಿಸಿ ನಾವೆಲ್ಲ ಸರಕಾರದ ಆದೇಶ ಪಾಲಿಸಲೇಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯರು, ಮಿಲಿಟರಿ, ಪೊಲೀಸ್ ಸಮೂಹದ ಜತೆ ಮಾಧ್ಯಮದವರನ್ನೂ “ಅಗತ್ಯ ಸೇವಕ’ರೆಂದು ಘೋಷಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಈ ವ್ಯಾಖ್ಯಾನಕ್ಕೆ ಸಹಮತ ವ್ಯಕ್ತಪಡಿಸಿ ಮಾಧ್ಯಮವನ್ನು ಅಗತ್ಯ ಸೇವೆಗಳ ಪಟ್ಟಿಗೆ ಸೇರಿಸಿದ್ದಾರೆ.
Related Articles
Advertisement
ಅನಗತ್ಯ ಭಯ ಬಿತ್ತಿ, ಸುಳ್ಳು ಸುದ್ದಿಗಳನ್ನು ಹರಡಿ ಸೋಶಿಯಲ್ ಮೀಡಿಯಾಗಳು, ವಾಟ್ಸ್‌ಆ್ಯಪ್ ಸಂದೇಶಗಳು ಜನರ ಜೀವನವನ್ನು ದುರ್ಭರಗೊಳಿಸುತ್ತಿರುವ ಇವತ್ತಿನ ಸಂದರ್ಭಗಳಲ್ಲಿ ಖಚಿತ, ವಿಶ್ವಾಸಾರ್ಹ, ಪರಾಮರ್ಶೆ ಮಾಡಿದ ಸುದ್ದಿಗಳನ್ನು ಪಡೆಯುವ ಸುರಕ್ಷಿತ ಮಾರ್ಗ ಪತ್ರಿಕೆಗಳನ್ನು ಬಿಟ್ಟರೆ ಬೇರೆ ಯಾವುದಿದೆ? ಹೀಗಾಗಿ ಪತ್ರಕರ್ತರು,ಮುದ್ರಣ ತಂತ್ರಜ್ಞರು, ನಿಮ್ಮ ಮನೆ ಬಾಗಿಲಿಗೆ ಮಳೆ, ಗಾಳಿ, ಚಳಿಗೆ ಜಗ್ಗದೆ ಪತ್ರಿಕೆ ಹೊತ್ತು ತರುವ ವಿತರಕ ಸೇನಾನಿಗಳು “ಅಗತ್ಯ ಸೇವೆ’ಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಿಯ ಓದುಗ ದೊರೆಗಳೇ, ನಾವು ಗರಿಷ್ಠ ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸುವ ಸಂಕಲ್ಪ ಮಾಡಿದ್ದೇವೆ. ವದಂತಿಗಳಿಗೆ ಕಿವಿಗೊಡಬೇಡಿ. ನಾವು, ನೀವು ಸೇರಿ ಯುದ್ಧ ಮತ್ತು ಶಾಂತಿಯ ಕಾಲಗಳೆರಡರಲ್ಲೂ ಮನುಕುಲದ ಹಿತ ಕಾಯುವ ಕೆಲಸ ಮಾಡೋಣ. ಕೊರೊನಾ ಮಣಿಸೋಣ, ದೇಶವನ್ನು ಗೆಲ್ಲಿಸೋಣ…
ಸುದ್ದಿ ಮಾಧ್ಯಮ ಒಂದು ಹೊಣೆಗಾರಿಕೆ, ಮುದ್ರಣ ಒಂದು ಪ್ರಮಾಣ… – ಸಂಪಾದಕರು
ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಹೊಸದಿಗಂತ