ತೀರ್ಥಹಳ್ಳಿ: ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಕಾಡುಕೋಣ ತಿವಿದು ಅಸಿಮನೆ ರಾಘವೇಂದ್ರ ಎಂಬ ರೈತ ಗಂಭೀರ ಗಾಯಗೊಂಡಿದ್ದು ಅವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ.
ಸೋಮವಾರ ಸಂಜೆ ಆರು ಗಂಟೆ ಸುಮಾರಿಗೆ ನಡೆದ ಈ ಘಟನೆಯಲ್ಲಿ ಸದರಿ ರಾಘವೇಂದ್ರ ತಮ್ಮ ಮನೆ ಮುಂದಿರುವ ಅಡಿಕೆ ತೋಟಕ್ಕೆ ಬಂದಿದ್ದ ಕಾಡುಕೋಣವನ್ನು ಓಡಿಸಲು ತಮ್ಮ ಪತ್ನಿಯ ಜೊತೆ ತೋಟಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಕಾಡುಕೋಣ ರಾಘವೇಂದ್ರರವರ ಮೇಲೆ ಎಗರಿ ಕೋಡಿನಿಂದ ತಿವಿದ ಪರಿಣಾಮ ರಾಘವೇಂದ್ರರವರ ಹೊಟ್ಟೆಗೆ ಗಂಭೀರ ಗಾಯವಾಗಿದೆ.
ಇದನ್ನು ಕಂಡ ರಾಘವೇಂದ್ರ ಪತ್ನಿ ಪ್ರಜ್ಞೆತಪ್ಪಿ ಬಿದ್ದಿದ್ದರು. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಸಿರುಮನೆ ನಂದನ್ ರಾಘವೇಂದ್ರರನ್ನು ತಮ್ಮ ಕಾರಿನಲ್ಲಿ ಮುಖ್ಯರಸ್ತೆಗೆ ಕರೆತಂದಿದ್ದರು. ಹಾಗೂ 108 ವಾಹನಕ್ಕೆ ದೂರವಾಣಿ ಕರೆ ಮಾಡಿದರು. ನಂತರ ಅದೇ ವಾಹನದಲ್ಲಿ ರಾಘವೇಂದ್ರರನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಲಾಗಿದೆ .
ಅರಣ್ಯ ಇಲಾಖೆಯವರು ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಅಸ್ವಸ್ಥಗೊಂಡ ರಾಘವೇಂದ್ರ ಅವರ ಜೊತೆಯಲ್ಲಿಯೇ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ.
ಮಾನವೀಯತೆ ಮೆರೆದ ಹಸಿರುಮನೆ ನಂದನ್:
ತಕ್ಷಣ ಈ ಘಟನೆಯನ್ನು ತಿಳಿದ ಆಗುಂಬೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಹಸಿರುಮನೆ ನಂದನ್ ಹಾಗೂ ಅವರ ಸ್ನೇಹಿತರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಅಸ್ವಸ್ಥಗೊಂಡ ರಾಘವೇಂದ್ರ ಭಟ್ ಅವರನ್ನು ಆಸ್ಪತ್ರೆಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ ನಂದನ್ ರವರ ಸೇವೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.