ಬೆಂಗಳೂರು: ಕಿರುಕುಳ ನೀಡಿದ್ದಾರೆ ಎಂಬ ಮಹಿಳೆಯೊಬ್ಬರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಕಟಿಸದಂತೆ ಸಿಟಿ ಸಿವಿಲ್ ಕೋರ್ಟ್‌ನಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮಾಧ್ಯಮಗಳ ವಿರುದ್ಧ ಪಡೆದುಕೊಂಡಿದ್ದ ನಿರ್ಬಂಧ ಆದೇಶವನ್ನು ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿದೆ.
ಈ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತ ತೀರ್ಪು ಪ್ರಕಟಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸಿಟಿ ಸಿವಿಲ್ ಕೋರ್ಟ್‌ನ ಆದೇಶ ತೆರವುಗೊಳಿಸಿ, ಮಾಧ್ಯಮಗಳು ಅವಹೇಳನಕಾರಿ ಸುದ್ದಿಯನ್ನು ಪ್ರಕಟ ಅಥವಾ ಪ್ರಸಾರ ಮಾಡಿದರೆ, ಆ ಕುರಿತು ಅರ್ಜಿದಾರರು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪ ಸಂಬಂಧ ತೇಜಸ್ವಿ ಸೂರ್ಯ ವಿರುದ್ಧ ಮಾಧ್ಯಮಗಳು ಅವಹೇಳನಕಾರಿ ಸುದ್ದಿ ಪ್ರಕಟಿಸಬಾರದು ಎಂದು ಸಿವಿಲ್ ಕೋರ್ಟ್ ಹೊರಡಿಸಿದ ಆದೇಶ ತೆರವುಗೊಳಿಸಬೇಕು ಎಂದು ಕೋರಿ ದೆಹಲಿ ಮೂಲದ ಎಡಿಆರ್ ಸಂಸ್ಥೆ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಗುರುವಾರ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತ್ತು.
ಸುದ್ದಿ ಪ್ರಸಾರ ಅಥವಾ ಪ್ರಕಟಗೊಂಡ ನಂತರವಷ್ಟೇ ಮಾನಹಾನಿ ಹೇಳಿಕೆ ಅಥವಾ ದೃಶ್ಯ ಎಂಬುದನ್ನು ನಿರ್ಧರಿಸಲು ಸಾಧ್ಯ. ತನ್ನ ಮಾನಹಾನಿಯಾಗಿದೆ ಎಂದು ಹೇಳುವ ವ್ಯಕ್ತಿ ಅಂತಹ ಸುದ್ದಿ ಪ್ರಸಾರ ಅಥವಾ ಪ್ರಕಟವಾದ ಮೇಲೆ ಅದನ್ನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಬಹುದು. ಮಾಧ್ಯಮಗಳಿಗೆ ಸುದ್ದಿ ಪ್ರಸಾರ ಮಾಡುವ ಹಕ್ಕು ಇದೆ.
ಅದರಂತೆ ಮಾನಹಾನಿಕಾರಿಯಲ್ಲದ ಸುದ್ದಿ ಎಂದು ಮಾಧ್ಯಮಗಳು ಅಭಿಪ್ರಾಯಕ್ಕೆ ಬಂದರೆ, ಅದನ್ನು ಪ್ರಸಾರ ಅಥವಾ ಪ್ರಕಟ ಮಾಡಬಹುದು. ಒಂದೊಮ್ಮೆ ಪ್ರಸಾರ ಅಥವಾ ಪ್ರಕಟವಾದ ನಂತರ ಅದು ಮಾನಹಾನಿ ಸುದ್ದಿ ಎಂದು ಭಾವಿಸಿದರೆ, ಅರ್ಜಿದಾರರು ಆ ಕುರಿತು ಕೇಂದ್ರ ಚುನವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.