ಬೆಳ್ತಂಗಡಿ : ಹಿಡಿದ ಪಾತ್ರೆಯಲ್ಲಿ ಕಸವಿದ್ದರೆ ಪ್ರಸಾದವೂ ಹಾಳಾಗುತ್ತದೆ. ಹಾಗೆಯೇ ಕಾಯ- ವಾಚ- ಮನಸಾ ನಾವು ಶುದ್ಧಿಯಾಗಿದ್ದರೆ ದೇವರ ಆಶೀರ್ವಾದ ಶತಸಿದ್ದ. ಇಂದು ಪಾನಮುಕ್ತರಾಗಿ ಪಾತ್ರೆ ಶುದ್ಧ ಮಾಡಿ ಬಂದ ನಿಮ್ಮ ಪೂಜೆಯನ್ನು ದೇವರು ಮೆಚ್ಚುತ್ತಾನೆ. ಇದೊಂದು ಪರಿಪೂರ್ಣ ಕ್ಷೇತ್ರ ಭೇಟಿ. ಇದರಿಂದ ಪೂರ್ಣಾನುಗ್ರಹ ಪ್ರಾಪ್ತಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಲ್ಲಿ ಪಾನಮುಕ್ತರಾದವರ ಶತದಿನೋತ್ಸವ ಮತ್ತು ದೃಢ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರು ಮಾತನಾಡಿ, ಪ್ರಾಣಿ ಪಕ್ಷಿಗಳು ದೇವರು ನೀಡಿದ ಸಂಸ್ಕೃತಿ ಬಿಡುವುದಿಲ್ಲ. ದೇವರ ಸೃಷ್ಟಿಯಲ್ಲಿ ಪ್ರತಿಯೊಬ್ಬರಿಗೆ ಜವಾಬ್ದಾರಿಯಿದೆ. ಜನರು ಸ್ವಸ್ಥರಾಗಿದ್ದರೆ ದೇಶಕ್ಕೆ ಸಂಪತ್ತು. ಇಲ್ಲದಿದ್ದರೆ ವಿಪತ್ತು. ಅದಕ್ಕಾಗಿ ದೇವರ ಸ್ವಭಾವ ಮನುಷ್ಯತ್ವವನ್ನು ರೂಪಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ವಿವೇಕ್ ವಿ. ಪಾ„ಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಶಿಬಿರಾಧಿಕಾರಿಗಳಾದ ಭಾಸ್ಕರ್, ಗಣೇಶ್, ಮನೋಹರ್, ನಂದ ಕುಮಾರ್, ಮೈಸೂರಿನ ರಮೇಶ್, ಹುಣಸೂರಿನ ಮಹದೇವ, ಗಣಪತಿ, ಸಾ.ರಾ. ಮಹೇಶ್, ಅರಕಲಗೂಡಿನ ರಮೇಶ್, ಚಂದ್ರಪ್ರಭಾ, ಸುರೇಖಾ, ಮಾಧವ್, ರಮೇಶ್, ನೇತ್ರಾವತಿ, ರಾಜಾಸಾಬ್, ಬಾಬಣ್ಣ, ರವಿ, ಪ್ರತಾಪ್, ರಾಘವೇಂದ್ರ, ಮೋಹನ್, ಸುರೇಶ್ ಉಪಸ್ಥಿತರಿದ್ದರು.
ಪಾನಮುಕ್ತರಿಗೆ ನವಜೀವನ ಬ್ಯಾಡ್ಜ್ ವಿತರಿಸಲಾಯಿತು. ಮೈಸೂರು, ಅಥಣಿ, ಹುಣಸೂರು, ಉಡುಪಿ, ಸೊರಬ, ಹೊಳೆನರಸೀಪುರ, ನಂಜನಗೂಡು, ಅರಕಲಗೂಡು, ಹರಿಹರ, ರಾಮದುರ್ಗಾದಿಂದ ಪಾನಮುಕ್ತ ನವಜೀವನ ಸದಸ್ಯರು ಆಗಮಿಸಿದ್ದರು. 10 ಶಿಬಿರಗಳ 600 ಜನ ಶಿಬಿರಾರ್ಥಿಗಳು ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.