ಸದ್ದು ಮಾಡಿದವು…
Advertisement
ಬಾಲಕೋಟ್ ದಾಳಿಫೆ.26ರಂದು ಸೂರ್ಯ ಮೂಡುತ್ತಿದ್ದಂತೆ ದೇಶವಿಡೀ ದಿಗ್ಭ್ರಮೆಯಲ್ಲಿ ಮುಳುಗಿತ್ತು. ಬೆಳಕು ಹರಿಯುವುದಕ್ಕೂ ಸ್ವಲ್ಪ ಮುನ್ನವೇ ನಮ್ಮ ವಾಯುಪಡೆಯು ಪಿಒಕೆ ಗಡಿ ದಾಟಿ ಹೋಗಿ, ಪಾಕಿಸ್ಥಾನದ ಬಾಲಕೋಟ್‌ನಲ್ಲಿ ಜೈಶ್ ಉಗ್ರರ ಶಿಬಿರದ ಮೇಲೆ ಭಾರೀ ಪ್ರಮಾಣದ ಸ್ಫೋಟಕಗಳನ್ನು ಡ್ರಾಪ್ ಮಾಡಿ ಬಂದಿತ್ತು. ಈ ಅನಿರೀಕ್ಷಿತ ದಾಳಿಗೆ ಬಾಲಕೋಟ್‌ನ ಉಗ್ರ ಶಿಬಿರಗಳು ನಾಶವಾಗಿದ್ದಲ್ಲದೆ, ಅಲ್ಲಿದ್ದ ಭಾರೀ ಸಂಖ್ಯೆಯ ಉಗ್ರರೂ ಹತರಾದರು.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಈವರೆಗೆ ಯಾರೂ ಮಾಡದಂಥ ಸಾಹಸವನ್ನು ಮಾಡಲು ಸೆ.7ರಂದು ಇಸ್ರೋ ಮುಂದಾಯಿತು. ಚಂದ್ರನ ಅತ್ಯಂತ ಸಮೀಪದವರೆಗೂ ಅಂದುಕೊಂಡಂತೆಯೇ ಸಾಗಿದ್ದ ವಿಕ್ರಮ್ ಲ್ಯಾಂಡರ್ ಇನ್ನೇನು ದಕ್ಷಿಣ ಧ್ರುವವನ್ನು ಸ್ಪರ್ಶಿಸಬೇಕು ಎನ್ನುವಷ್ಟರಲ್ಲಿ ಕಣ್ಮರೆಯಾಯಿತು. ಅಂದು ಇಸ್ರೋ ಇತಿಹಾಸವೊಂದನ್ನು ನಿರ್ಮಿಸಲಿದೆ ಎಂದು ಇಡೀ ದೇಶವೇ ಕಾಯುತ್ತಿತ್ತು. ಆದರೆ ಕೊನೇ ಕ್ಷಣದಲ್ಲಾದ ಸಣ್ಣ ಸಮಸ್ಯೆಯು ದೇಶವಾಸಿಗಳಿಗೆ ನಿರಾಸೆ ಉಂಟು ಮಾಡಿತಾದರೂ, ಇಸ್ರೋ ವಿಜ್ಞಾನಿಗಳ ಶ್ರಮವನ್ನು ಎಲ್ಲರೂ ಕೊಂಡಾಡಿದರು. ಪ್ರಧಾನಿ ಮೋದಿ ಅವರಂತೂ ಇಸ್ರೋ ಅಧ್ಯಕ್ಷ ಶಿವನ್‌ರನ್ನು ಆಲಿಂಗಿಸಿಕೊಂಡು ಸಮಾಧಾನಿಸಿದ ಪರಿ ಮೆಚ್ಚುಗೆಗೆ ಪಾತ್ರವಾಯಿತು.
Related Articles
ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ನಡೆದ ರಾಜಕೀಯ ಹೈಡ್ರಾಮಾ ಇಡೀ ದೇಶದ ಗಮನ ಸೆಳೆಯಿತು. ಕಾಂಗ್ರೆಸ್-ಜೆಡಿಎಸ್‌ನ ಒಟ್ಟು 17 ಶಾಸಕರು ಏಕಾಏಕಿ ರಾಜೀನಾಮೆ ನೀಡಿ, ರೆಸಾರ್ಟ್ ವಾಸ ಆರಂಭಿಸುವ ಮೂಲಕ ಸರಕಾರದ ಪತನಕ್ಕೆ ಕಾರಣವಾದರು. ಅವರನ್ನು ಮನವೊಲಿಸಲು ನಡೆಸಿದ ಎಲ್ಲ ಯತ್ನಗಳೂ ವಿಫಲವಾದವು. ರಾಜಕೀಯ ವಾಗ್ಯುದ್ಧವೂ ನಡೆದವು. ಕೊನೆಗೆ ಸ್ಪೀಕರ್ ಆಗಿದ್ದ ರಮೇಶ್‌ಕುಮಾರ್ ಅವರು ಈ ಶಾಸಕರನ್ನು ಅನರ್ಹಗೊಳಿಸಿದರು. ಇದು ಅನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ಅಲ್ಲಿ ಈ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕೋರ್ಟ್ ಅವಕಾಶ ಕಲ್ಪಿಸಿತು. ಅನಂತರ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ 15 ಅನರ್ಹ ಶಾಸಕರ ಪೈಕಿ 12 ಮಂದಿ ಗೆದ್ದು ಬಂದು, ಜನತಾ ನ್ಯಾಯಾಲಯದಲ್ಲಿ ಗೆದ್ದೆವೆಂದು ಬೀಗಿದ್ದೂ ಆಯಿತು.
Advertisement
ಲೋಕಸಭೆ ಚುನಾವಣೆಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಜನ ಮತ್ತೂಮ್ಮೆ ಅಧಿಕಾರ ಕ್ಕೆ ಏರಿಸುತ್ತಾರೋ, ಇಲ್ಲವೋ ಎಂಬ ಕುತೂಹಲಕಾರಿ ಪ್ರಶ್ನೆಯೊಂದಿಗೆ 17ನೇ ಲೋಕ ಸಭೆಗೆ ಏ.11ರಿಂದ ಮೇ 19ರವರೆಗೆ ನಡೆದ ಚುನಾವಣೆಯ ಫಲಿತಾಂಶವು ಬಿಜೆಪಿಗೆ ಅಭೂತಪೂರ್ವ ಜಯ ತಂದುಕೊಟ್ಟಿತು. ಸ್ವತಃ ಬಿಜೆಪಿ ನಾಯಕತ್ವವೇ ನಿರೀಕ್ಷಿಸಿರದಷ್ಟು ಸ್ಥಾನಗಳು ಕಮಲ ಪಕ್ಷಕ್ಕೆ ಬಂದವು. ಮೇ 23ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ 303 ಸ್ಥಾನ ಗಳಿಸಿ ಕೇಂದ್ರದಲ್ಲಿ ಮತ್ತೂಮ್ಮೆ ಎನ್‌ಡಿಎ (353) ಗದ್ದುಗೆಗೇರಿತು. ಕಾಂಗ್ರೆಸ್ ಕೇವಲ 52 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಒಟ್ಟಿನಲ್ಲಿ ಜನಾದೇಶ ಪ್ರಧಾನಿ ಮೋದಿ ಪರವೇ ಬಂದಿದ್ದು ದೇಶ-ವಿದೇಶಗಳಾದ್ಯಂತ ಭಾರೀ ಸುದ್ದಿಯಾಯಿತು. 370ನೇ ವಿಧಿ ರದ್ದು
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಆಗಸ್ಟ್ 5ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಹೊರಡಿಸಿದರು. ತನ್ಮೂಲಕ ದಶಕಗಳಿಂದ ಕಾಶ್ಮೀರಿ ನಾಯಕರಿಗೆ, ಪ್ರತ್ಯೇಕತಾವಾದಿಗಳಿಗೆ ಶ್ರೀರಕ್ಷೆಯಂತಿದ್ದ ಆರ್ಟಿಕಲ್ 370, 37ಎ ಕೊನೆಯಾದವು. ಮುನ್ನೆಚ್ಚರಿಕೆ ಕ್ರಮವಾಗಿ ಕಾಶ್ಮೀರಿ ನಾಯಕರನ್ನು ಗೃಹ ಬಂಧನದಲ್ಲಿ ಇಡಲಾಗಿದೆ. ಒಟ್ಟಲ್ಲಿ ಮೊದಲಿನಿಂದಲೂ ಕಾಶ್ಮೀರಿ ರಾಜಕಾರಣಿಗಳ ಮಲತಾಯಿ ಧೋರಣೆಯಿಂದ ಬೇಸತ್ತಿದ್ದ ಜಮ್ಮು ಮತ್ತು ಲಡಾಖ್ ಪ್ರಾಂತ್ಯಗಳು ನಿಟ್ಟುಸಿರು ಬಿಟ್ಟವು. ಇನ್ನು, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾ ಡ ಳಿತ ಪ್ರದೇಶಗಳಾಗಿರುವುದೂ ಕೂಡ ಮಹತ್ತರ
ಬದಲಾವಣೆಯೇ ಸರಿ. ತ್ರಿವಳಿ ತಲಾಖ್
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರಕ್ಕೆ ಅತಿದೊಡ್ಡ ರಾಜ ಕೀಯ ಜಯ ಎಂಬಂತೆ ಜು.30 ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕಕ್ಕೆ ಅಂಗೀಕಾರ ದೊರೆಯಿತು. 2017ರಿಂದಲೂ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದಗಳಿಗೆ ಕಾರಣವಾಗಿದ್ದ ಈ ವಿಧೇಯಕವು ರಾಜ್ಯ ಸಭೆಯಲ್ಲಿ ದೀರ್ಘ ಚರ್ಚೆಯ ಬಳಿಕ ಅಂಗೀಕಾರ ಪಡೆಯಿತು. ಏಕಕಾಲಕ್ಕೆ 3 ಬಾರಿ ತಲಾಖ್ ಹೇಳುವ ಪದ್ಧತಿ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಕೂಡ ಕೇಂದ್ರ ಸರಕಾರಕ್ಕೆ ವರವಾಗಿ ಪರಿಣಮಿಸಿತು. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಎತ್ತಿಹಿಡಿದ ಈ ವಿಧೇಯಕವು ಐತಿಹಾಸಿಕ ಕ್ರಮ ಎಂದು ಕೊಂಡಾಡಲಾಯಿತು. ಕರ್ತಾರ್ಪುರ ಕಾರಿಡಾರ್
ಪಾಕಿಸ್ತಾನದಲ್ಲಿರುವ ಸಿಖ್ಖರ ಪವಿತ್ರ ಗುರುದ್ವಾರ ದರ್ಬಾರ್ ಸಾಹಿಬ್‌ಗ ಪಂಜಾಬ್‌ನ ಡೇರಾ ಬಾಬಾ ನಾನಕ್ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ಸೇತುವಾಗಿ ಕರ್ತಾರ್ಪುರ ಕಾರಿಡಾರ್ ನಿರ್ಮಾಣ ಮಾಡುವ ಐತಿಹಾಸಿಕ ಒಪ್ಪಂದವನ್ನು ಭಾರತ ಹಾಗೂ ಪಾಕ್ ಮಾಡಿಕೊಂಡವು.
ಅದರ ಫಲವಾಗಿ ಭಾರತದ ಸಿಖ್ ಯಾತ್ರಿಕರು ಗಡಿಯಿಂದ 4 ಕಿ.ಮೀ. ದೂರವಿರುವ ಪವಿತ್ರ ದರ್ಬಾರ್ ಸಾಹಿಬ್‌ಗ ಈ ಕಾರಿಡಾರ್ ಮೂಲಕ ವೀಸಾ ರಹಿತವಾಗಿ ಯಾತ್ರೆ ಕೈಗೊಳ್ಳಲು ಸಾಧ್ಯವಾಯಿತು. ಈ ಒಪ್ಪಂದವು ಎರಡೂ ದೇಶಗಳ ನಡುವೆ ಮೂಡಿದ್ದ ವೈಮನಸ್ಸನ್ನು ಸ್ವಲ್ಪಮಟ್ಟಿಗೆ ತಣಿಸಲೂ ನೆರವಾಯಿತು. ಅಯೋಧ್ಯೆ ತೀರ್ಪು
ಹಲವು ದಶಕಗಳಿಂದ ಪರಿಹಾರವಾಗದೇ ಉಳಿದಿದ್ದ ಅಯೋಧ್ಯೆಯ ಭೂವಿವಾದಕ್ಕೆ ಸರ್ವೋಚ್ಚ ನ್ಯಾಯಾಲಯವು ನ.9ರಂದು ತೆರೆ ಎಳೆಯಿತು. 2.77 ಎಕರೆ ಭೂಮಿಗೆ ಸಂಬಂಧಿಸಿದ ದೀರ್ಘಕಾಲದ ವಿವಾದಕ್ಕೆ ಸಂಬಂಧಿಸಿ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ, ಈ ವಿವಾದಿತ ಜಾಗವು ರಾಮ್‌ಲಲ್ಲಾಗೆ ಸೇರಬೇಕು ಎಂದು ಘೋಷಿಸಿತು. ಈ ಮೂಲಕ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಬೇಕೆನ್ನುವ ಕೋಟ್ಯಂತರ ಭಾರತೀಯರ ಬಯಕೆಯ ಈಡೇರಿಕೆಗೆ ಮುನ್ನುಡಿ ಬರೆಯಿತು. ಇದೇ ವೇಳೆ, ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲೇ 5 ಎಕರೆ ಜಾಗವನ್ನು ಮುಸ್ಲಿಮರಿಗೆ ನೀಡಬೇಕು ಎಂದೂ ಆದೇಶಿಸುವ ಮೂಲಕ ಅಲ್ಪಸಂಖ್ಯಾತರಿಗೂ ನ್ಯಾಯ ಒದಗಿಸಿತು. ಎನ್‌ಆರ್‌ಸಿ, ಪೌರತ್ವ ಕಾಯ್ದೆ
ಎನ್‌ಆರ್‌ಸಿ ಹಾಗೂ ಪೌರತ್ವ ಕಾಯ್ದೆಗೆ ತಂದ ತಿದ್ದುಪಡಿ ದೇಶಾದ್ಯಂತ ಸದ್ದು ಮಾಡಿತು. ಪಾಕ್, ಅಫ್ಘಾನ್ ಹಾಗೂ ಬಾಂಗ್ಲಾದೇಶದಿಂದ ಮತೀಯ ಹಿಂಸೆಗೆ ತುತ್ತಾಗಿ ಭಾರತಕ್ಕೆ ಬಂದವರಿಗೆ ಪೌರತ್ವ ನೀಡುವ ಸಿಎಬಿ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತದೆ ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು, ಮುಸ್ಲಿಮರು ಸೇರಿದಂತೆ ನಾಗರಿಕ ಸಮುದಾಯ ಪ್ರತಿಭಟಿಸತೊಡಗಿತು. ಕಾಯ್ದೆ ಕುರಿತು ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಕಾಯ್ದೆಯ ಪರ ರ್ಯಾಲಿಗಳೂ ನಡೆದವು. ಮಹಾರಾಷ್ಟ್ರ ಚುನಾವಣೆ
2019ರಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆದರೂ ಅಧಿಕ ಸುದ್ದಿಯಾಗಿದ್ದು ಮಹಾರಾಷ್ಟ್ರದ ಚುನಾವಣೆ. ಇದಕ್ಕೆ ಕಾರಣವೂ ಇದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಶಿವಸೇನೆ ಸ್ಪಷ್ಟ ಬಹುಮತ ಪಡೆಯುವಲ್ಲಿ ಸಫಲವಾಯಿತು. ಆದರೆ, ಅಧಿಕಾರ ಹಂಚಿಕೆಗೆ ಸಂಬಂಧಿಸಿ ಎರಡೂ ಪಕ್ಷಗಳ ನಡುವೆ ಒಡಕು ಶುರುವಾಯಿತು. ಇದರ ನಡುವೆಯೇ, ಕಾಂಗ್ರೆಸ್-ಎನ್‌ಸಿಪಿಯ ಸಂಪರ್ಕ ಸಾಧಿಸಿದ ಶಿವಸೇನೆ, ಮಹಾ ವಿಕಾಸ್ ಅಘಾಡಿ ಹೆಸರಲ್ಲಿ ಸರಕಾರ ರಚನೆ ಮಾಡುವುದಾಗಿ ಘೋಷಿಸಿತು. ಸಿಎಂ ಆಗುವ ಕನಸು ಕಾಣುತ್ತಿದ್ದ ಉದ್ಧವ್‌ಗೆ ರಾತ್ರಿ ಬೆಳಗಾಗುವಷ್ಟರಲ್ಲಿ ಬಿಜೆಪಿ ಶಾಕ್ ನೀಡಿತು. ಮುಂಜಾವಿನಲ್ಲೇ ಬಿಜೆಪಿಯ ಫಡ್ನವೀಸ್ ಎನ್‌ಸಿಪಿಯ ಅಜಿತ್ ಪವಾರ್ ಜತೆ ಡೀಲ್ ಮಾಡಿಕೊಂಡು, ಪ್ರಮಾಣ ವಚನ ಸ್ವೀಕರಿಸಿಬಿಟ್ಟಿದ್ದರು. ಇದು ಕೂಡ ಸುಪ್ರೀಂ ಮೆಟ್ಟಿಲೇರಿ, ಕೊನೆಗೆ ವಿಶ್ವಾಸಮತ ಸಾಬೀತುಪಡಿಸಲಾಗದೆ ಫಡ್ನವೀಸ್ ರಾಜೀನಾಮೆ ನೀಡಬೇಕಾಯಿತು. ಉದ್ಧವ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು.