ಕೊಪ್ಪಳ: ಕಳೆದ 12 ವರ್ಷಗಳಿಂದ ನೀರಿಲ್ಲದೇ ಬಿಕೋ ಎನ್ನುತ್ತಿದ್ದ ತಾಲೂಕಿನ ಇಂದರಗಿ ಕೆರೆಗೆ ಈ ವರ್ಷ ಜೀವಕಳೆಬಂದಿದೆ. 70 ಎಕರೆ ವಿಸ್ತಾರ ಹೊಂದಿರುವ ಕೆರೆಗೆ ಗವಿಸಿದ್ದೇಶ್ವರ ಶ್ರೀಗಳ ಪ್ರೇರಣೆಯಿಂದ ಸ್ವಯಂ ಗ್ರಾಮಸ್ಥರೇ ಹೊಟ್ಟೆಬೆನಕನನಾಲ ತಿರುವು ದುರಸ್ತಿ ಮಾಡಿಸಿ ಗುಡ್ಡದ ಪ್ರದೇಶದಲ್ಲಿ ವ್ಯರ್ಥವಾಗಿಹರಿಯುವ ನೀರು ಹಿಡಿದಿಟ್ಟುಕೊಂಡು ಕೆರೆಗೆ ಮರುಜೀವ ಮಾದರಿಯಾಗಿದ್ದಾರೆ.
ತಾಲೂಕಿನ ಕೊನೆಯ ಭಾಗದ ಇಂದರಗಿಗ್ರಾಮಗುಡ್ಡಬೆಟ್ಟಗಳ ಮಧ್ಯದಲ್ಲಿದೆ. ಈ ಪ್ರದೇಶ ನೀರಾವರಿ ವ್ಯಾಪ್ತಿ ಎಂದು ಗುರುತಿಸಲ್ಪಟ್ಟರೂ ಅಲ್ಪ ಸ್ವಲ್ಪ ನೀರಾವರಿ ಪ್ರದೇಶ ಹೊಂದಿದೆ. ಸತತ ಮಳೆಯ ಕೊರತೆ ಎದುರಿಸುತ್ತಿದ್ದ ಈ ಭಾಗದ ಜನತೆ ನೀರಿನ ಮೂಲ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಗ್ರಾಮ ಪಕ್ಕದಲ್ಲೇ ಇರುವ ಹೊಸಕೆರೆಯ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಭಿವೃದ್ಧಿ ಮಾಡಿರಲಿಲ್ಲ.ಕೆರೆಗೆ ಕಾಯಕಲ್ಪ ಸಿಗಲಿದೆಯೋ ಇಲ್ಲವೋ ಎಂಬುವಂತಾಗಿತ್ತು.
ಶ್ರೀಗಳ ಪ್ರೇರಣೆ: ಇದೇ ವೇಳೆ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿ ಕಳೆದ ಮಾರ್ಚ್ ತಿಂಗಳಲ್ಲಿ 26 ಕಿ.ಮೀ. ಉದ್ದದ ಹಿರೇಹಳ್ಳ ಸ್ವತ್ಛಗೊಳಿಸುವ ಸಂಕಲ್ಪ ಮಾಡಿದ್ದಲ್ಲದೇ ಕಾರ್ಯಾರಂಭ ಮಾಡಿದರು. ಇದರಿಂದ ಪ್ರೇರಿತಗೊಂಡ ಇಂದರಗಿ ಗ್ರಾಮಸ್ಥರು ಶ್ರೀಗಳನ್ನು ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಶ್ರೀಗಳು ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ಬಗ್ಗೆ ಮಾತನ್ನಾಡಿದ್ದರಿಂದ, ಇಂದರಗಿ ಹೊಸಕೆರೆಗೆ ನೀರು ಸಂಗ್ರಹವಾಗದೇ ಇರುವ ಕುರಿತು ಶ್ರೀಗಳ ಗಮನಕ್ಕೆ ತಂದಿದ್ದರು. ಶ್ರೀಗಳು ಹೊಸಕೆರೆ ಸ್ಥಳಕ್ಕೆ ತೆರಳಿ 5-6 ಕಿ.ಮೀ. ಗುಡ್ಡದಲ್ಲಿ ಸುತ್ತಾಡಿ ಗಮನಿಸಿದ್ದರು.
ಹೊಟ್ಟೆಬೆನಕನ ನಾಲೆ ತಿರುವು ದುರಸ್ತಿ: 1984ರ ಅವಧಿಯಲ್ಲಿ ಹೊಸ ಕೆರೆ ನಿರ್ಮಿಸಿದ್ದರೂ ನಾಲ್ಕೆದು ಬಾರಿ ಮಾತ್ರ ನೀರು ತುಂಬಿತ್ತು. ಬಳಿಕ ಕೆರೆಯ ನಾಲೆ ಮುಚ್ಚಿ ಹೋಗಿದ್ದರಿಂದ ಇತ್ತ ಯಾರೂ ಲಕ್ಷ ಕೊಟ್ಟಿರಲಿಲ್ಲ. ಇಂದರಗಿ ಮತ್ತು ಬೊಮ್ಮಸಾಗರ ತಾಂಡಾ ಗ್ರಾಮಗಳ ಅರಣ್ಯ ಪ್ರದೇಶದ ನೀರು ಹೊಟ್ಟೆಬೆನಕನ ನಾಲೆ ಮೂಲಕ ನೀರು ಹರಿದು ಹೋಗಿ ಮುಕ್ಕುಂಪಿ ಗ್ರಾಮದತ್ತ ಸಾಗಿ ವ್ಯರ್ಥವಾಗಿ ಹೋಗುತ್ತಿತ್ತು. ಈ ವಿಷಯವನ್ನು ಶ್ರೀಗಳ ಗಮನಕ್ಕೆ ತಂದಾಗ ನಾಲೆ ದುರಸ್ತಿ ಕೈಗೊಳ್ಳಲು ಮಾರ್ಗದರ್ಶನ ಮಾಡಿದ್ದರು. 25 ಟ್ರಾಕ್ಟರ್ ಹಾಗೂ 5 ಜೆಸಿಬಿಗಳು 24 ದಿನಗಳ ಕಾಲ ನಾಲೆ ದುರಸ್ತಿ ಕಾರ್ಯದಲ್ಲಿ ತೊಡಗಿದ್ದವು. ಸ್ವತಃ ಗ್ರಾಮಸ್ಥರೇ ಯಾರಿಂದಲೂ ಹಣ ಪಡೆಯದೇ ಸ್ವಯಂ ಹಣ ಸಂಗ್ರಹಿಸಿ ಕೆರೆಗೆ ನಾಲೆ ಜೋಡಣೆ ಕಾರ್ಯ ಮಾಡಿದ್ದರು.
12 ವರ್ಷದ ಬಳಿಕ ಕೆರೆಗೆ ನೀರು: ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡದ ಕಾರ್ಯವನ್ನು ಸ್ವತಃ ಗ್ರಾಮಸ್ಥರೇ ಮಾಡಿ ತೋರಿಸಿದ್ದರಿಂದ ಕೆರೆಗೆ ನೀರು ಹರಿಯುವಂತಾಗಿದೆ. ಗವಿಸಿದ್ದೇಶ್ವರ ಶ್ರೀ ಮಾರ್ಗದರ್ಶನ ಹಾಗೂ ಗ್ರಾಮಸ್ಥರ ಪ್ರಯತ್ನ ಕೈ ಹಿಡಿದಿದೆ.12 ವರ್ಷಗಳ ಹಿಂದೆ ಕೆರೆಗೆ ನೀರು ಹರಿದು ಬಂದಿತ್ತು. ತರುವಾಯ ನೀರು ಸಂಗ್ರಹವಾಗಿರಲಿಲ್ಲ. 12 ವರ್ಷಗಳ ಬಳಿಕ ಕೆರೆಗೆ ಮತ್ತೆ ಜೀವಕಳೆ ಬಂದಿದೆ.
-ದತ್ತು ಕಮ್ಮಾರ