Advertisement

ಅನ್ನದಾತನಿಗೆ ಆತ್ಮ ಬಂಧುವಾದ ಕಂಪನಿ

09:12 PM Apr 16, 2021 | Team Udayavani |

ಹುಬ್ಬಳ್ಳಿ : ಬಿತ್ತನೆಯಿಂದ ಹಿಡಿದು ಕೊಯ್ಲು ಹಾಗೂ ಕೃಷಿ ಉತ್ಪನ್ನ ಖರೀದಿವರೆಗೂ ರೈತರಿಗೆ ವಿವಿಧ ಸರಕಾರಿ ಸೌಲಭ್ಯ-ಯೋಜನೆಗಳ ಪ್ರಯೋಜನ ಒದಗಿಸುವ ಮಹತ್ವಾಕಾಂಕ್ಷಿಯೊಂದಿಗೆ ಆರಂಭಗೊಂಡ ಬಾಗಲಕೋಟೆ ಜಿಲ್ಲೆ ತೇರದಾಳದಲ್ಲಿರುವ ಶ್ರೀ ಪ್ರಭುಲಿಂಗೇಶ್ವರ ರೈತ ಉತ್ಪಾದಕ ಕಂಪನಿ ಇತರರಿಗೆ ಮಾದರಿಯಾಗುವ ಹತ್ತು ಹಲವು ಕಾರ್ಯಗಳಿಗೆ ಮುಂದಾಗಿದೆ.

Advertisement

ನಬಾರ್ಡ್‌ ನೆರವಿನೊಂದಿಗೆ ಕಾರ್ಯಾರಂಭಗೊಂಡಿರುವ ಕಂಪೆನಿಗೆ ಸಂಕಲ್ಪ ಗ್ರಾಮೀಣಭಿವೃದ್ಧಿ ಸಂಸ್ಥೆ ಮಾರ್ಗದರ್ಶನ ಮಾಡುತ್ತಿದೆ. ಈಗಾಗಲೇ ಹಲವು ರಚನಾತ್ಮಕ ಕಾರ್ಯ ಕೈಗೊಳ್ಳುವ ಮೂಲಕ ರೈತರ ಮನಗೆಲ್ಲುವತ್ತ ಮಹತ್ವದ ಹೆಜ್ಜೆಗಳನ್ನಿರಿಸಿದೆ. ಒಂದೇ ಬೆಳೆಯನ್ನು ಸಾಮೂಹಿಕವಾಗಿ ಹಾಕುವ ಬದಲು ಬೇರೆ ಬೇರೆ ಬೆಳೆ ಬೆಳೆಯುವ ತಿಳಿವಳಿಕೆ ನೀಡುವ ಚಿಂತನೆಯನ್ನು ಕಂಪೆನಿ ಹೊಂದಿದೆ. ವಿಶೇಷವಾಗಿ ರೈತರಿಗೆ ಬೇಕಾಗುವ ವಿವಿಧ ಸಾಮಗ್ರಿ ಒಂದೇ ವೇದಿಕೆಯಡಿ ಒದಗಿಸುವುದಕ್ಕೆ ಮುಂದಾಗಿದೆ.

250 ಷೇರುದಾರರು: ಸಂಕಷ್ಟದಲ್ಲಿರುವ, ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಗೊತ್ತಿರದ ರೈತರಿಗೆ ನೆರವಾಗಬೇಕೆಂಬ ಉದ್ದೇಶದೊಂದಿಗೆ ಕೆಲ ಯುವಕರು, 10 ಜನ ಸಮಾನ ಮನಸ್ಕರ ಪ್ರವರ್ತಕರು(ಪ್ರಮೋಟರ್) ಕೃಷಿ ಸಂಕಷ್ಟಗಳಿಗೆ ಏನು ಮಾಡಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬ ಚಿಂತನೆ ಫಲವಾಗಿಯೇ 2020ರ ಜೂನ್‌ 6ರಂದು ಶ್ರೀ ಪ್ರಭುಲಿಂಗೇಶ್ವರ ರೈತ ಉತ್ಪಾದಕ ಕಂಪೆನಿ ಜನ್ಮ ತಳೆದಿದೆ.

ಕಂಪೆನಿ ಐದು ಜನ ನಿರ್ದೇಶಕರನ್ನು ಹೊಂದಿದೆ. ರೈತರಿಗೆ ಮಾಹಿತಿ, ಮಾರ್ಗದರ್ಶನಕ್ಕಾಗಿ ವಿವಿಧ ತಜ್ಞರು, ಮಾರ್ಗದರ್ಶಕ ಸಮಿತಿ ಹೊಂದಿದೆ. ಇದುವರೆಗೆ ಒಟ್ಟು 250 ಷೇರುದಾರರಿದ್ದಾರೆ. ಈ ಕಂಪೆನಿಗೆ ಅಗತ್ಯ ತರಬೇತಿ, ಮಾರ್ಗದರ್ಶನಕ್ಕಾಗಿ ನಬಾರ್ಡ್‌ ಹುಬ್ಬಳ್ಳಿಯ ಸಂಕಲ್ಪ ಗ್ರಾಮೀಣಭಿವೃದ್ಧಿ ಸಂಸ್ಥೆಯನ್ನು ನೇಮಿಸಿತ್ತು.

ಈಗಾಗಲೇ ಕಂಪೆನಿ ಪ್ರವರ್ತಕರು, ನಿರ್ದೇಶಕರು, ರೈತರಿಗೆ ವಿವಿಧ ರೀತಿ ತರಬೇತಿಗಳಾಗಿದ್ದು, ಇನ್ನಷ್ಟು ತರಬೇತಿಯ ಪಟ್ಟಿ ಸಿದ್ಧಗೊಂಡಿದೆ. ಬೀಜೋಪಚಾರ-ಸಾವಯವಕ್ಕೆ ಒತ್ತು: ಕಂಪೆನಿ ತನ್ನ ಷೇರುದಾರ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ನೀಡುವ ಯೋಜನೆ ಹೊಂದಿದೆ. ಇದಕ್ಕಾಗಿ ಬೀಜೋಪಚಾರ ಕೈಗೊಂಡು ಗುಣಮಟ್ಟದ ಬಿತ್ತನೆ ಬೀಜ ರೈತರಿಗೆ ನೀಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ತಯಾರಿ ಕೈಗೊಂಡಿದೆ. ಈಗಾಗಲೇ ರೈತರಿಗೆ ಪಶು ಆಹಾರ ನೀಡುತ್ತಿದೆ. ಕೃಷಿಗೆ ಬೇಕಾಗುವ ತಾಡಪತ್ರಿಗಳನ್ನು ನೇರವಾಗಿ ಖರೀದಿಸಿ, ರೈತರಿಗೆ ಮಾರುಕಟ್ಟೆಗಿಂತ ಕಡಿಮೆ ದರಕ್ಕೆ ನೂರಾರು ತಾಡಪತ್ರಿಗಳನ್ನು ಮಾರಿದೆ.

Advertisement

ರೈತರಿಗೆ ಮಣ್ಣು ಪರೀಕ್ಷೆ ಅರಿವು ಮೂಡಿಸುತ್ತಿದ್ದು, ಮಣ್ಣಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಂಪೆನಿಯಿಂದಲೇ ಮಣ್ಣು ಪರೀಕ್ಷೆ ಕೇಂದ್ರ ಆರಂಭಕ್ಕೆ ಮುಂದಾಗಿದ್ದು, ಇದುವರೆಗೂ ಪರವಾನಗಿ ಸಿಕ್ಕಿಲ್ಲ. ತೇರದಾಳ ಭಾಗದಲ್ಲಿ ರೈತರು ಕಬ್ಬು, ಅರಿಶಿಣ, ಮೆಕ್ಕೆಜೋಳ ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದು, ಇದರ ಬದಲು ಇತರೆ ಬೆಳೆ ಬೆಳೆಯಲು ಒತ್ತು ನೀಡಲು ರೈತರನ್ನು ಪ್ರೇರೇಪಿಸುತ್ತಿದೆ.

ರೈತರಿಗೆ ನೀರಿನ ಸದ್ಬಳಕೆ, ಮಿತಬಳಕೆಯ ತಿಳಿವಳಿಕೆ, ಸೋಲಾರ್‌ ಸಲಕರಣೆಗಳು, ಹನಿ ನೀರಾವರಿ, ತುಂತುರು ನೀರಾವರಿ ಸಲಕರಣೆಗಳನ್ನು ಒದಗಿಸಲು ಯೋಜಿಸಲಾಗಿದೆ. ಮಠಾ ಧೀಶರ ನೇತೃತ್ವದಲ್ಲಿ ರೈತರಲ್ಲಿ ಸಾವಯವ ಕೃಷಿ ಪದ್ಧತಿ ಪ್ರೇರಣೆ, ಮನೆಯಲ್ಲಿ ದೇಸಿ ಹಸುಗಳ ಸಾಕಣೆ ಅಭಿಯಾನ ಕೈಗೊಳ್ಳಲು ಯೋಜಿಸಲಾಗಿದೆ. ರೈತರು ಉತಾರದೊಂದಿಗೆ ಕಂಪೆನಿ ಕಚೇರಿಗೆ ಬಂದರೆ ಎಲ್ಲ ರೀತಿಯ ನೆರವು, ಮಾರ್ಗದರ್ಶನ ನೀಡಲು ಚಿಂತಿಸಲಾಗಿದೆ. ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಎಫ್‌ಪಿಒ ಮೂಲಕ ಖರೀದಿಸುವುದಷ್ಟೇ ಅಲ್ಲ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ವಿವಿಧ ದೊಡ್ಡ ಕಂಪೆನಿಗಳೊಂದಿಗೆ ಸಮಾಲೋಚಿಸಲಾಗಿದೆ. ಗುಜರಾತ್‌ ನ ಅಮುಲ್‌ ಕಂಪೆನಿಯಿಂದ ಪಶು ಆಹಾರ ತರಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ರೈತರಿಂದ ಮೆಕ್ಕೆಜೋಳ ಖರೀದಿಸುವಂತೆ ಕೇಳಿಕೊಳ್ಳಲಾಗಿದ್ದು, ಚರ್ಚೆ ನಡೆದಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next