ಮುಂಬೈ: ನಟ ಅರ್ಬಾಜ್ ಖಾನ್ ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ಮನೆಯಲ್ಲಿ ಭಾನುವಾರ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಸಮಾರಂಭದ ಕೆಲವು ಗಂಟೆಗಳ ನಂತರ, ತಮ್ಮ ವಿವಾಹ ಸಮಾರಂಭದ ಚಿತ್ರಗಳನ್ನು 56 ರ ಹರೆಯದ ಅರ್ಬಾಜ್ ಖಾನ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
”ನಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ, ನಾನು ಮತ್ತು ನನ್ನವಳು ಈ ದಿನದಿಂದ ಜೀವಮಾನದ ಪ್ರೀತಿ ಮತ್ತು ಒಗ್ಗಟ್ಟಿನ ಜೀವನವನ್ನು ಪ್ರಾರಂಭಿಸುತ್ತೇವೆ!. ನಮ್ಮ ಈ ವಿಶೇಷ ದಿನದಂದು ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಬೇಕು!” ಎಂದು ಪೋಸ್ಟ್ ಮಾಡಿದ್ದಾರೆ.
ಅರ್ಬಾಜ್ ಖಾನ್ ಅವರ ಸಹೋದರರಾದ ಸಲ್ಮಾನ್ ಖಾನ್ , ಸೊಹೈಲ್ ಖಾನ್ ಮತ್ತು ಸಹೋದರಿ ಅಲ್ವಿರಾ ಅವರು ಸಮಾರಂಭದ ಭಾಗವಾಗಿದ್ದರು. ಅರ್ಬಾಜ್ ಅವರ ಪುತ್ರ ಅರ್ಹಾನ್ ಖಾನ್ ಕೂಡ ಮದುವೆ ಪಾರ್ಟಿಯಲ್ಲಿ ಹಾಜರಿದ್ದರು. ಸ್ನೇಹಿತರಾದ ರವೀನಾ ಟಂಡನ್, ಫರಾ ಖಾನ್, ಸಂಜಯ್ ಕಪೂರ್ ಇತರರು ಭಾಗಿಯಾದರು.
ವರದಿಗಳ ಪ್ರಕಾರ, ಇದು ಶುರಾ ಅವರದ್ದೂ ಎರಡನೇ ಮದುವೆ. ಅರ್ಬಾಜ್ ಈ ಹಿಂದೆ 1998 ರಲ್ಲಿ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದರು, ಮೇ 2017 ರಲ್ಲಿ ಅಧಿಕೃತವಾಗಿ ಬೇರ್ಪಟ್ಟಿದ್ದರು. ಮಲೈಕಾ ಮತ್ತು ಅರ್ಬಾಜ್ ಅವರ ಪುತ್ರ ಅರ್ಹಾನ್. ಅರ್ಬಾಜ್ ಖಾನ್ ಈ ಹಿಂದೆ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಅವರೊಂದಿಗೆ ಸಂಬಂಧವನ್ನೂ ಹೊಂದಿದ್ದರು. ಶುರಾ ಜುಲೈ 1982 ರಲ್ಲಿ ಜನಿಸಿದ್ದು, ಈಗ 41 ರ ಹರೆಯ. ನವವಿವಾಹಿತರ ನಡುವೆ 15 ವರ್ಷಗಳ ವಯಸ್ಸಿನ ಅಂತರವಿದೆ.