Advertisement

ಅತೃಪ್ತಿಯ ವಿಸ್ತರಣೆ

01:22 AM Jun 15, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನ ಕಸರತ್ತಿನ ಭಾಗವಾಗಿ ನಿರೀಕ್ಷೆಯಂತೆ ಪಕ್ಷೇತರ ಶಾಸಕರಾದ ಆರ್‌.ಶಂಕರ್‌ ಹಾಗೂ ಎಚ್.ನಾಗೇಶ್‌ ಸಂಪುಟ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಸಚಿವಾಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಅತೃಪ್ತರಿಗೆ ನಿಗಮ ಮಂಡಳಿ ಸ್ಥಾನಮಾನ ನೀಡಿ ಸಮಾಧಾನಪಡಿಸುವ ಪ್ರಯತ್ನವೂ ನಡೆದಿದೆ.

Advertisement

ರಾಜಭವನದ ಗಾಜಿನ ಮನೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಣೆಬೆನ್ನೂರು ಶಾಸಕ ಆರ್‌.ಶಂಕರ್‌ ಹಾಗೂ ಮುಳಬಾಗಿಲು ಶಾಸಕ ಎಚ್. ನಾಗೇಶ್‌ ಸಂಪುಟ ದರ್ಜೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ರಾಜ್ಯಪಾಲ ವಜೂಭಾಯ್‌ ವಾಲಾ ಪ್ರತಿಜ್ಞಾ ವಿಧಿ ಬೋಧಿಸಿದರು.

ಜೆಡಿಎಸ್‌ನಿಂದ ಅಲ್ಪಸಂಖ್ಯಾತರ ಕೋಟಾದಡಿ ಬಿ.ಎಂ.ಫಾರೂಕ್‌ ಸಚಿವರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ, ಸಂಪುಟ ವಿಸ್ತರಣೆಗೆ ಮುನ್ನ ಸಿಎಂ ಕುಮಾರಸ್ವಾಮಿಯವರು ಫಾರೂಕ್‌ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತನಾಡಿ ಮುಂದೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎದುರಾದರೆ, ಆಪರೇಷನ್‌ ಕಮಲ ಕಾರ್ಯಾಚರಣೆ ಮತ್ತೆ ಆರಂಭವಾದರೆ ಎಂಬ ತುರ್ತು ಸಂದರ್ಭಕ್ಕೆ ಇರಲಿ ಎಂದು ಜೆಡಿಎಸ್‌ ಒಂದು ಸ್ಥಾನ ಹಾಗೇ ಉಳಿಸಿಕೊಂಡಿದೆ. ಇದರಿಂದ ಅತೃಪ್ತರಿಗೆ ‘ನಿಮಗಾಗಿಯೇ ಆ ಸ್ಥಾನ’ ಎಂದು ಭರವಸೆ ನೀಡಿ ವಿಶ್ವಾಸಗಳಿಸಬಹುದು ಎಂಬ ಉದ್ದೇಶ ಎಂದು ಹೇಳಲಾಗಿದೆ.

ಇಬ್ಬರು ಪಕ್ಷೇತರರ ಸೇರ್ಪಡೆಯಿಂದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದ ಒಟ್ಟು 33 ಸ್ಥಾನಗಳಲ್ಲಿ 32 ಭರ್ತಿಯಾದಂತಾಗಿದ್ದು, ಜೆಡಿಎಸ್‌ನ ಇನ್ನೊಂದು ಕೋಟಾ ಮಾತ್ರ ಉಳಿದಿದೆ.

Advertisement

ಪ್ರಮಾಣದ ನಂತರ ಶಂಕರ್‌, ಸಿದ್ದರಾಮಯ್ಯ ಕಾಲಿಗೆ, ನಾಗೇಶ್‌, ಸಿಎಂ ಕಾಲಿಗೆ ನಮಸ್ಕರಿಸಿದರು.

ಅತೃಪ್ತರ ಗೈರು: ಡಿಸಿಎಂ ಡಾ.ಜಿ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್‌, ಜಮೀರ್‌ ಅಹಮದ್‌, ಬಂಡೆಪ್ಪ ಕಾಶೆಂಪೂರ್‌, ಕೃಷ್ಣ ಬೈರೇಗೌಡ, ಮಾಜಿ ಸಚಿವ ಎಚ್.ಆಂಜನೇಯ, ಸಂಸದ ಡಿ.ಕೆ.ಸುರೇಶ್‌, ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಕೆಪಿಸಿಸಿ ಆಧ್ಯಕ್ಷ ದಿನೇಶ್‌ ಗುಂಡೂರಾವ್‌, ಜೆಡಿಎಸ್‌ನ ಎಚ್.ವಿಶ್ವನಾಥ್‌ , ಇತ್ತೀಚೆಗೆ ಕಾಂಗ್ರೆಸ್‌ ಭಿನ್ನಮತದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್‌ ಹಿರಿಯ ನಾಯಕರಾದ ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ ಸೇರಿ ಹಲವರು ಗೈರು ಹಾಜರಾಗಿದ್ದರು.

ವಿಸ್ತರಣೆಗೆ ಕಾರಣಗಳೇನು?

•ಬಿಜೆಪಿಯೇನಾದರೂ ಇಬ್ಬರು ಪಕ್ಷೇತರರನ್ನು ಸೆಳೆಯಬಹುದು ಎಂಬ ಆತಂಕ •ಪಕ್ಷೇತರರು ಬಿಜೆಪಿಯತ್ತ ಹೋದರೆ ಬಿಜೆಪಿ ಸಂಖ್ಯಾಬಲ 107 ಆಗಲಿರುವ ಭಯ ಹಿನ್ನೆಲೆ •ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಪಕ್ಷೇತರ ಶಾಸಕರಿಗೆ ಮಣೆ ಹಾಕುವ ಅನಿವಾರ್ಯತೆ •ಬಿಜೆಪಿಯ ಸಂಖ್ಯಾಬಲ ಹೆಚ್ಚಾಗದಂತೆ ನೋಡಿಕೊಳ್ಳುವ ತಂತ್ರಗಾರಿಕೆ •ಸಮ್ಮಿಶ್ರ ಸರ್ಕಾರ ಸುಭದ್ರ ಎಂಬ ಸಂದೇಶ ರವಾನಿಸುವ ಕಾರ್ಯತಂತ್ರ •ಜೆಡಿಎಸ್‌ನಿಂದ ಒಂದು, ಕಾಂಗ್ರೆಸ್‌ನಿಂದ ಒಂದು ಸ್ಥಾನ ಪಕ್ಷೇತರರಿಗೆ ತ್ಯಾಗ
•ಸರ್ಕಾರ ಉಳಿಸಿಕೊಳ್ಳಲು ಪಕ್ಷೇತರರಿಗೆ ಅವಕಾಶ, ಉಳಿದವರಿಗಿಲ್ಲ ಎಂದು ಅತೃಪ್ತಿ ಶಮನಗೊಳಿಸುವ ತಂತ್ರ

ಯಾವ ಖಾತೆ ?
ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿರುವ ಆರ್‌.ಶಂಕರ್‌ಗೆ ಪೌರಾಡಳಿತ, ಎಚ್.ನಾಗೇಶ್‌ಗೆ ಜವಳಿ ಖಾತೆ ನೀಡುವ ಸಾಧ್ಯತೆಯಿದೆ. ಸಿ.ಎಸ್‌.ಶಿವಳ್ಳಿ ಅವರ ಬಳಿಯಿದ್ದ ಪೌರಾಡಳಿತ ಶಂಕರ್‌ಗೆ ನೀಡುವುದಾದರೆ, ಎನ್‌.ಮಹೇಶ್‌ ಅವರ ಬಳಿಯಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನನಗೆ ಬೇಕು ಎಂದು ನಾಗೇಶ್‌ ಬೇಡಿಕೆ ಇಟ್ಟಿದ್ದಾರೆ. ಆದರೆ, ಅಂತಿಮವಾಗಿ ಸಿಎಂ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಬೂದಿ ಮುಚ್ಚಿದ ಕೆಂಡ
ಕಾಂಗ್ರೆಸ್‌ನ ರಾಜ್ಯ ನಾಯಕರ ಈ ನಿರ್ಧಾರದ ಬಗ್ಗೆ ಪಕ್ಷದ ಹಿರಿಯ ಶಾಸಕರಿಂದ ಹಿಡಿದ ಬಹುತೇಕರು ಅಸಮಾಧಾನ ಹೊಂದಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ತಕ್ಷಣವೇ ಯಾರ ವಿರುದ್ಧವೂ ಬಹಿರಂಗವಾಗಿ ಆಕ್ರೋಶ ಹೊರ ಹಾಕದೇ ನಾಯಕರ ಮೇಲಿನ ಸಿಟ್ಟು, ಆಕ್ರೋಶ, ಅಸಹಾಯಕತೆಯನ್ನು ಅದುಮಿಟ್ಟುಕೊಂಡಿದ್ದು, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.
ಕೋಳಿವಾಡ ಅವರಿಗೆ ಅರುಳ್ಳೋ, ಮರುಳ್ಳೋ ತಿಳಿಯದು. ನಾನು ಕಾಂಗ್ರೆಸ್‌ ಸೇರಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಒಳ್ಳೆಯ ಖಾತೆ ಕೊಡುವ ನಿರೀಕ್ಷೆಯಿದೆ, ಯಾವುದೇ ಖಾತೆ ಕೊಟ್ಟರೂ ಕೆಲಸ ಮಾಡುವೆ.
-ಆರ್‌.ಶಂಕರ್‌, ನೂತನ ಸಚಿವ
ಸಚಿವನಾಗಿರುವುದು ಸಂತೋಷ ತಂದಿದೆ. ಯಾವ ಖಾತೆ ಸಿಕ್ಕರೂ ಕೆಲಸ ಮಾಡುತ್ತೇನೆ. ಪಾಲಿಗೆ ಬಂದಿದ್ದು ಪಂಚಾಮೃತ. ಕೊತ್ತೂರು ಮಂಜುನಾಥ್‌ ಆಶೀರ್ವಾದ, ಕ್ಷೇತ್ರದ ಜನರ ಆಶೀರ್ವಾದದಿಂದ ಸಚಿವನಾಗಿದ್ದೇನೆ.
– ಎಚ್.ನಾಗೇಶ್‌, ನೂತನ ಸಚಿವ
Advertisement

Udayavani is now on Telegram. Click here to join our channel and stay updated with the latest news.

Next