ದೇರ್ಗಾಂವ್: ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಶಾಂತಿಯನ್ನು ಮರಳಿ ತರುವ ಪ್ರಯತ್ನದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದವರು ಸೇರಿದಂತೆ ಹೊಸದಾಗಿ ನೇಮಕಗೊಂಡ ಪೊಲೀಸ್ ಕೆಡೆಟ್‌ಗಳನ್ನು ಒಂದೇ ತಂಡಗಳಲ್ಲಿ ನಿಯೋಜಿಸಲಾಗುವುದು ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಸೋಮವಾರ (ಡಿ23) ಹೇಳಿದ್ದಾರೆ.
ಮಣಿಪುರ ಪೊಲೀಸ್‌ನ ಸುಮಾರು 2,000 ಮಂದಿ ಸೋಮವಾರ ಇಲ್ಲಿನ ಲಚಿತ್ ಬೊರ್ಫುಕನ್ ಪೊಲೀಸ್ ಅಕಾಡೆಮಿಯಿಂದ ಉತ್ತೀರ್ಣಗೊಂಡಿದ್ದು, ರಾಜ್ಯದಲ್ಲಿ ಪೊಲೀಸ್ ಬಲವನ್ನು ಹೆಚ್ಚಿಸಿವೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಸ್ಸಾಂ ಮತ್ತು ಮಣಿಪುರ ರಾಜ್ಯಪಾಲರಾದ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಮತ್ತು ಸಿಎಂ ಬಿರೇನ್ ಸಿಂಗ್ ಪಾಲ್ಗೊಂಡಿದ್ದರು.
“ಸಮುದಾಯವಾರು ವಿಭಜನೆಯು ಪ್ರಸ್ತುತ ಪರಿಸ್ಥಿತಿಯಿಂದಾಗಿ ನಡೆಯಿತು. ಈ ಹಿಂದೆ ಹೀಗಿರಲಿಲ್ಲ, ಮುಂದೆಯೂ ಹೀಗಾಗಲು ಬಿಡುವುದಿಲ್ಲ. ಹೊಸದಾಗಿ ತರಬೇತಿ ಪಡೆದ ಸಿಬಂದಿ ಇಲ್ಲಿ ತರಬೇತಿ ನೀಡಿದಂತೆ ಎಲ್ಲವನ್ನೂ ಒಟ್ಟಾಗಿ ಮಾಡಬೇಕು. ರಾಜ್ಯದಲ್ಲಿ ಶಾಂತಿ ನೆಲೆಸಲು ನಾವು ಒಟ್ಟಾಗಿ ಕೆಲಸ ಮಾಡಲು ಪ್ರಾರಂಭಿಸಬೇಕು. ಅವರ ಪೋಸ್ಟಿಂಗ್‌ಗಳು ಒಟ್ಟಿಗೆ ಇರುತ್ತವೆ. ನಾವು ತಂಡವನ್ನು ಒಡೆಯುವುದಿಲ್ಲ. ಹಿಂದಿನ ಮಣಿಪುರದ ಏಕತೆಯನ್ನು ಪುನಃಸ್ಥಾಪಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ಸಿಎಂ ಸಮಾರಂಭದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಇಲ್ಲಿನ ಲಚಿತ್ ಬೊರ್ಫುಕನ್ ಪೊಲೀಸ್ ಅಕಾಡೆಮಿಯಿಂದ ಮಣಿಪುರ ಪೋಲಿಸ್‌ನ 1,946 ಉತ್ತೀರ್ಣರಾದ ನೇಮಕಾತಿಗಳಲ್ಲಿ, ಅವರ ಜಾತಿ ಹಂಚಿಕೆಯು ಪ್ರಕಾರ 62% ಮೈತೇಯಿಗಳು, 12% ಕುಕಿಗಳು ಮತ್ತು ಉಳಿದ 26% ನಾಗಾ ಮತ್ತು ಇತರ ಬುಡಕಟ್ಟುಗಳಿಗೆ ಸೇರಿದವರಾಗಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಇದು ಸಂಕೀರ್ಣವಾಗಿದ್ದು, ಸಾಮಾನ್ಯ ಸ್ಥಿತಿಗೆ ಬರಲು ಸಮಯ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ಶಾಂತಿ ಮರಳುತ್ತಿರುವುದನ್ನು ನಾವೆಲ್ಲರೂ ನೋಡಿದ್ದೇವೆ” ಎಂದು ಸಿಂಗ್ ಹೇಳಿದರು.