ಕೋಲಾರ: ‘ನನ್ನ ಪತಿಯೊಂದಿಗೆ ಜೀವನ ಮಾಡಲು ಅವಕಾಶ ಮಾಡಿಕೊಡಿ’ ಎಂದು ಒತ್ತಾಯಿಸಿ ನವವಿವಾಹಿತೆಯೊಬ್ಬರು ಪತಿ ಮನೆ ಮುಂದೆ ಧರಣಿ ನಡೆಸುತ್ತಿರುವ ಘಟನೆ ತಾಲೂಕಿನ ಸೀತಿ ಹೊಸೂರಿನಲ್ಲಿ ನಡೆದಿದೆ.
ವೇಮಗಲ್ ಗ್ರಾಮದ ಮುನಿಯಪ್ಪ ಎಂಬವರ ಮಗಳಾದ ನಾಗವೇಣಿ ಧರಣಿ ನಡೆಸುತ್ತಿರುವಾಕೆ.
ನೆಲಗಂಗಮ್ಮ ದೇಗುಲದಲ್ಲಿ ಮದುವೆ:
ಇವರು ವೇಮಗಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಾನು ಸೀತಿ ಹೊಸೂರಿನ ಪವನ್ ಕುಮಾರ್ (25) ರನ್ನು ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದು, ಜೂ.5 ರಂದು ನಗರದ ನೆಲಗಂಗಮ್ಮ ದೇವಾಲಯದಲ್ಲಿ ನಮ್ಮ ಮದುವೆಯಾಗಿದೆ. ಜೂ.5 ರಿಂದ ಜೂ.14 ರವರೆಗೂ ನಾವು ತಿರುಪತಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದು, ಜೂ.14 ರಂದು ನನ್ನ ಪತಿಯ ದೊಡ್ಡಪ್ಪನ ಮಗ ಮುರಳಿ ಮತ್ತು ಏಳೆಂಟು ಮಂದಿ ಅವರ ಸ್ನೇಹಿತರು ತಿರುಪತಿಗೆ ಬಂದು ನನ್ನನ್ನು ಅಲ್ಲಿಯೇ ಬಿಟ್ಟು ನನ್ನ ಪತಿಯನ್ನು ಕಾರಿನಲ್ಲಿ ಎತ್ತಿಹಾಕಿಕೊಂಡು ಬಂದಿದ್ದಾರೆ ಎಂದು ದೂರು ನೀಡಿದ್ದಾರೆ.
ಪತಿಯನ್ನು ದೂರ ಮಾಡುವ ಪ್ರಯತ್ನ: ತಿರುಪತಿಯಲ್ಲಿ ಒಬ್ಬಳೇ ಆಗಿ ಸಂಕಷ್ಟಕ್ಕೀಡಾದ ನಾನು ನನ್ನ ಚಿಕ್ಕಮ್ಮ ಅವರನ್ನು ಅಲ್ಲಿಗೆ ಕರೆಸಿಕೊಂಡು ವೇಮಗಲ್ಗೆ ವಾಪಸ್ಸಾಗಿದ್ದೇನೆ ಎಂದು ತಿಳಿಸಿರುವ ಅವರು, ನನ್ನ ಪತಿಯ ಮೊಬೈಲ್ನ್ನು ಕಿತ್ತುಕೊಂಡಿದ್ದು, ನಾನು ಕರೆ ಮಾಡಿದರೆ ಮುರಳಿ ಎಂಬುವವರು ರಿಸೀವ್ ಮಾಡುತ್ತಿದ್ದು, ನನ್ನ ಪತಿಯನ್ನು ನನ್ನಿಂದದೂರ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ನನಗೆ ಆಗಿರುವ ಅನ್ಯಾಯ ಸರಿಪಡಿಸಿ, ನನ್ನ ಪತಿಯೊಂದಿಗೆ ನಾನು ಜೀವನ ನಡೆಸಲು ಅವಕಾಶ ಮಾಡಿಕೊಡಿಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೋರಿದ್ದಾರೆ.
ಅಂತರ್ಜಾತಿ ವಿವಾಹವೇ ಘಟನೆಗೆ ಕಾರಣ: ಪ್ರೇಮಿಗಳಿಬ್ಬರನ್ನು ಬೇರ್ಪಡಿಸಲು ಅಂತರ್ಜಾತಿ ವಿವಾಹವೇ ಕಾರಣ ಎಂದು ತಿಳಿಸಿರುವ ಮುಕ್ತ ಕೌಟುಂಬಿಕ ಸಲಹಾ ಕೇಂದ್ರ ಮತ್ತು ಗಮನ ಮಹಿಳಾ ಸಮೂಹದ ಅಧ್ಯಕ್ಷೆ ಶಾಂತಮ್ಮ ಮಾಹಿತಿ ನೀಡಿದ್ದಾರೆ.
ಇದು ಅಂತರ್ಜಾತಿ ವಿವಾಹವಾಗಿರುವುದರಿಂದ ಇದಕ್ಕೆ ಪತಿ ಮನೆಯವರು ಒಪ್ಪುತ್ತಿಲ್ಲ ಎಂಬುದನ್ನು ಯುವತಿ ನಾಗಮಣಿ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ, ಪೊಲೀಸರು ಇದಕ್ಕೆ ನ್ಯಾಯ ಒದಗಿಸಿ, ವಿವಾಹಿತರನ್ನು ಒಂದು ಗೂಡಿಸಬೇಕು ಎಂದು ಕೋರಿದ್ದಾರೆ.