Advertisement
ಮದುವೆ ಹಾಲ್‌ನಲ್ಲೇ ಗಮನ ಸೆಳೆದದ್ದು ಸಿಂಗರಿಸಿ ನಿಲ್ಲಿಸಿದ್ದ ಜೆಸಿಬಿ. ಸಂಜೆ ವೇಳೆಗೆ ಮನೆ ಕಡೆ ಹೋಗಲು ವಧು ಹಾಗೂ ವರರು ಕಾರು ಹತ್ತುತ್ತಾರೆ ಎಂದು ಭಾವಿಸಿದ್ದರೆ, ಅದು ತಪ್ಪಾಗಿತ್ತು. ಬೆಳಗ್ಗೆ ಹಾಲ್ ಗೆ ಬಂದದ್ದು ಕಾರಿನಲ್ಲೇ ಆದರೂ, ಮರಳಿ ಹೋಗುವಾಗ ಜೆಸಿಬಿ ಹತ್ತಿದರು. ಸ್ವತಃ ಮದುಮಗನೇ ಜೆಸಿಬಿ ಚಾಲಕ. ಮದುಮಗಳನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ಎಲ್ಲರೂ ನೋಡನೋಡುತ್ತಿದ್ದಂತೆ ಮನೆ ಕಡೆ ತೆರಳಿದರು. ಮದುಮಗನಿಗೆ ಸ್ನೇಹಿತರು ಸಾಥ್ ನೀಡಿದರು. ಸಂಟ್ಯಾರ್‌ನಲ್ಲಿ ವಧು ಹಾಗೂ ವರರನ್ನು ಕೆಳಗಿಳಿಸಿ, ಜೆಸಿಬಿ ಮುಂಭಾಗದ ಬಕೆಟ್‌ನಲ್ಲಿ ಕುಳ್ಳಿರಿಸಿದರು. ಇನ್ನೊಬ್ಟಾತ ಜೆಸಿಬಿ ಚಲಾಯಿಸಿದ. ಸಂಟ್ಯಾರ್‌ನಲ್ಲಿ ಪಟಾಕಿ ಸಿಡಿಸಿ, ಸ್ವಾಗತ ನೀಡಿದರು. ಬಳಿಕ ಮೆರವಣಿಗೆ ರೀತಿಯಲ್ಲಿ ಕಲ್ಲಕಟ್ಟದ ಮನೆಗೆ ತೆರಳಿದರು.
ಸಂಭ್ರಮದ ಮೆರವಣಿಗೆ ಮನೆಗೆ ತಲುಪಿದರೆ, ವಧು ಹಾಗೂ ವರರಿಗೆ ಪರೀಕ್ಷೆ ಎದುರಾಗಿತ್ತು. ಮದುಮಗ ತೆಂಗಿನಕಾಯಿ ತುರಿಯಲು ಹಾಗೂ ಮದುಮಗಳು ಮೀನು ಶುಚಿಗೊಳಿಸಲು ತಿಳಿಸಿದರು. ಇದಾಗಿ, ಮದುಮಗಳನ್ನು ಅಡುಗೆ ಕೋಣೆಗೆ ಕರೆದೊಯ್ದು ಚಹಾ ಮಾಡಲು ತಿಳಿಸಿದರು. ಅಷ್ಟೇ ಅಲ್ಲ, ಆಕೆಯ ಕೈಯಲ್ಲೇ ನೆಂಟರಿಗೆ ಚಹಾ ವಿತರಣೆಯೂ ನಡೆಯಿತು. ಜೆಸಿಬಿ ಆಪರೇಟರ್
ಮದುಮಗಳು ಖಾಸಗಿ ಕಂಪೆನಿ ಉದ್ಯೋಗಿ. ಮದುಮಗ ಚೇತನ್ ಜೆಸಿಬಿ ಆಪರೇಟರ್ ಆಗಿರುವುದರಿಂದ, ತಾನು ಚಲಾಯಿಸುವ ಜೆಸಿಬಿಯಲ್ಲೇ ಮದುವೆ ದಿಬ್ಬಣ ಬರಲು ಸಿದ್ಧತೆ ನಡೆಸಿದ್ದರು. ಈ ಸನ್ನಿವೇಶದ ವೀಡಿಯೋ, ಫೂಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.