ಬರೋಡಾ: ಹೊಸದಾಗಿ ನಿರ್ಮಿಸಲಾದ ಇನ್ನೂ ಉದ್ಘಾಟನೆಯಾಗದ ಸೇತುವೆಯೊಂದು ಕುಸಿದು ಬಿದ್ದ ಘಟನೆ ಗುಜರಾತ್ ನಲ್ಲಿ ನಡೆದಿದೆ. ತಾಪಿ ಜಿಲ್ಲೆಯ ಮಿಂಡೋಲಾ ನದಿಗೆ ಕಟ್ಟಲಾಗಿದ್ದ ಸೇತುವೆ ಬುಧವಾರ ಬೆಳಿಗ್ಗೆ ಕುಸಿದಿದೆ.
ಬೆಳಗ್ಗೆ 6.30ರ ಸುಮಾರಿಗೆ ಈ ಘಟನೆ ನಡೆದಿದ್ದು, ವಾಲೋಡ್ ತಾಲೂಕಿನ ಮೇಪುರ ಗ್ರಾಮದಿಂದ ವ್ಯಾರ ತಾಲೂಕಿನ ದೆಹ್ಗಾಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ಸೇತುವೆಯ ಮಧ್ಯಭಾಗ ಕುಸಿದು ಮಿಂಡೋಲಾ ನದಿಗೆ ಬಿದ್ದಿದೆ.
ತಾಪಿ ಜಿಲ್ಲಾಧಿಕಾರಿ ವಿಪಿನ್ ಗಾರ್ಗ್ ಮಾತನಾಡಿ, ಸೇತುವೆಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ. ಸೇತುವೆಯ ಕೆಲವು ಭಾಗವು ಕುಸಿದಿದೆ. ನಾವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ. ಅಲ್ಲದೆ, ಬಳಸಿದ ವಸ್ತುಗಳ ಗುಣಮಟ್ಟವನ್ನು ಸಹ ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ:Congress ನಲ್ಲಿ ಮುಖ್ಯಮಂತ್ರಿ ರೇಸ್ ಗೆ ಹಲವು ಮಂದಿ : ಹೆಚ್.ಡಿ.ಕುಮಾರಸ್ವಾಮಿ
ಈ ಸ್ಥಳದಲ್ಲಿ ಈ ಮೊದಲು ಒಂದು ಸೇತುವೆ ಇತ್ತು. ಮಳೆಗಾಲದ ಸಮಯದಲ್ಲಿ ಸುತ್ತಲಿನ ಗ್ರಾಮದ ಜನರು ಇದನ್ನೇ ಬಳಸುತ್ತಿದ್ದರು. ಜನರು ರಾಜಕೀಯ ಮುಖಂಡರು ಮತ್ತು ರಾಜ್ಯ ಸರ್ಕಾರಕ್ಕೆ ಮನವಿಗಳನ್ನು ಕಳುಹಿಸಿದ ನಂತರ, ಅದೇ ಸ್ಥಳದಲ್ಲಿ ಹೊಸ ಸೇತುವೆಯ ನಿರ್ಮಾಣದ ಕೆಲಸವು 2021 ರಲ್ಲಿ ಪ್ರಾರಂಭವಾಯಿತು.
ಸೇತುವೆ ನಿರ್ಮಾಣದ ಕೆಲಸವು ಸಂಪೂರ್ಣವಾಗಿದ್ದು, ಉದ್ಘಾಟನೆಗೆ ಸಿದ್ದತೆ ನಡೆಯುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.