ಕನ್ನಡದಲ್ಲಿ ಹೊಸಬಗೆಯ ಸಿನಿಮಾಗಳಿಗೆ ಬರವಿಲ್ಲ. ಹಾಗೆಯೇ ಹೊಸತನದ ಶೀರ್ಷಿಕೆಗಳಿಗೇನೂ ಕಮ್ಮಿ ಇಲ್ಲ. ಈಗಾಗಲೇ ತಮ್ಮ ಶೀರ್ಷಿಕೆ ಮೂಲಕವೇ ಗಮನಸೆಳೆಯುತ್ತಿರುವ ಹೊಸಬರ ಚಿತ್ರಗಳ ಸಾಲಿಗೆ “ಇದೇ ಅಂತರಂಗ ಶುದ್ಧಿ’ ಎಂಬ ಸಿನಿಮಾ ಸೇರಿದೆ. ಹೌದು, ಶೀರ್ಷಿಕೆ ನೋಡಿದವರಿಗೆ ಇದು ಬಸವಣ್ಣನರ ತತ್ವಾದರ್ಶವಿರುವ ಸಿನಿಮಾನ ಎಂಬ ಪ್ರಶ್ನೆ ಕಾಡದೇ ಇರದು. ಆದರೆ, ಇಲ್ಲಿ ಬಸವಣ್ಣನವರ ತತ್ವಗಳಂತೆ, ಪ್ರತಿ ಪಾತ್ರಗಳಿಗೂ ಇಲ್ಲಿ ಶುದ್ಧೀಕರಣವಿದೆ.
ಪ್ರತಿ ಘಟನೆಗೂ ಶುದ್ಧಿಕರಣ ಬರುತ್ತೆ. ಹಾಗಾಗಿ, ಇದನ್ನೇ ಶೀರ್ಷಿಕೆಯನ್ನಾಗಿಸಿ, ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನು ಕುಮಾರ್ ದತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜವಾಬ್ದಾರಿಯೂ ಅವರದೇ. ಇವರ ಕಥೆ ಕೇಳಿ ಅಭಿಲಾಶ್ ಚಕ್ಲ ಮತ್ತು ನವಜೀತ್ ಬುಲ್ಲಾರ್ ನಿರ್ಮಾಣ ಮಾಡುತ್ತಿದ್ದಾರೆ. “ಇದೇ ಅಂತರಂಗ ಶುದ್ಧಿ’ ಎಂಬ ಶೀರ್ಷಿಕೆ ಇದೆ ಎಂಬ ಕಾರಣಕ್ಕೆ, ಇದು ಬಸವಣ್ಣನವರಿಗೆ ಸಂಬಂಧಿಸಿದ ಚಿತ್ರ ಎಂದುಕೊಳ್ಳುವಂತಿಲ್ಲ ಎನ್ನುವ ನಿರ್ದೇಶಕರು, ಇಲ್ಲಿ ಐಕ್ಯತೆ ಸಾರುವ ಅಂಶಗಳಿವೆ.
ಪ್ರೇಮ, ಕಾಮ, ಆಸೆ, ಜಾತಿ, ಧರ್ಮ ಎಲ್ಲದ್ದಕ್ಕೂ ಸಂಬಂಧಿಸಿದ ವಿಷಯಗಳಿವೆ. ಪ್ರತಿ ಪಾತ್ರದಲ್ಲೂ ಹೊಸ ವಿಷಯವಿದೆ. ಹೊಸತಂಡ ಸೇರಿ ಮಾಡಿರುವ ಸಿನಿಮಾದಲ್ಲಿ ಶೇ.90 ರಷ್ಟು ಚಿತ್ರೀಕರಣ ಕಾರಲ್ಲೇ ನಡೆಯಲಿದೆ. ಉಳಿದ ಶೇ.10 ರಷ್ಟು ಚಿತ್ರೀಕರಣ ಹೊರಗಡೆ ನಡೆಯಲಿದೆ. ಇನ್ನೊಂದು ವಿಶೇಷವೆಂದರೆ, ರಾತ್ರಿ ವೇಳೆಯಲ್ಲೇ ಬಹುತೇಕ ಶೂಟಿಂಗ್ ಮಾಡಿದ್ದು, ಕ್ಲೈಮ್ಯಾಕ್ಸ್ ಭಾಗ ಮಾತ್ರ ಹಗಲಿನಲ್ಲಿ ನಡೆದಿದೆ’ಎಂದು ವಿವರಿಸುತ್ತಾರೆ ನಿರ್ದೇಶಕ ಕುಮಾರ್ ದತ್. ಚಿತ್ರದಲ್ಲಿ ಆರ್ಯವರ್ಧನ್ ಹೀರೋ. ಅವರಿಗೆ ಪ್ರತಿಭಾ ನಾಯಕಿ. ಚಿತ್ರದ ವಿಶೇಷವೆಂದರೆ, ಜನರೇಟರ್ ಇಲ್ಲದೆಯೇ, ಬೀದಿ ಲೈಟ್‌ನಲ್ಲೇ ಚಿತ್ರೀಕರಿಸಿ, ಹೊಸ ಪ್ರಯೋಗ ಮಾಡಲಾಗಿದೆ.
ಬಹುತೇಕ ಬೆಂಗಳೂರಿನ ರಸ್ತೆಗಳಲ್ಲೇ ಅದರಲ್ಲೂ ಕಾರಿನಲ್ಲೇ ಚಿತ್ರೀಕರಿಸಿರುವುದು ಇನ್ನೊಂದು ವಿಶೇಷ. ಚಿತ್ರಕ್ಕೆ ಲವ್ ಮೆಹ್ತಾ ಸಂಗೀತವಿದೆ. ನಿರ್ದೇಶಕರ ಜೊತೆಗೆ ಜಗದೀಶ್ ಪಾಟೀಲ್ ಸಾಹಿತ್ಯ ಬರೆದಿದ್ದಾರೆ. ವಿನಯ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಶ್ರೀಧರ್, ಸೂರಜ್, ಮಂಜುಳಾ ರೆಡ್ಡಿ, ರೂಪೇಶ್, ಪುನೀತ್ ಸೇರಿದಂತೆ ಹೊಸ ಪ್ರತಿಭೆಗಳಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಈಗ ಡಿಟಿಎಸ್ ಕಾರ್ಯದಲ್ಲಿದೆ. ಇಷ್ಟರಲ್ಲೇ ಸೆನ್ಸಾರ್‌ಗೆ ಹೋಗಲು ಸಜ್ಜಾಗುತ್ತಿದೆ.