ಕನ್ನಡದಲ್ಲೀಗ ಅನೇಕ ಹೊಸಬರ ಚಿತ್ರಗಳು ಸದ್ದಿಲ್ಲದೆಯೇ ಶುರುವಾಗಿ, ಮಾತಿನ ಭಾಗದ ಚಿತ್ರೀಕರಣವನ್ನೂ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿವೆ. ಆ ಸಾಲಿಗೆ ಈಗ “ಶೋಕಿ’ ಎಂಬ ಚಿತ್ರವೂ ಸೇರಿದೆ. ಈ ಹಿಂದೆ ಹೊಸ ಪ್ರತಿಭೆ ಶರಣ್ಯಗೌಡ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು.
ಆಗ ಆ ಚಿತ್ರಕ್ಕೆ ಹೆಸರು ಇಟ್ಟಿರಲಿಲ್ಲ. ಅದಕ್ಕೆ “ಶೋಕಿ’ ಎಂದು ನಾಮಕರಣ ಮಾಡಿರುವ ನಿರ್ದೇಶಕ ಎಸ್.ವಿಷ್ಣುಪ್ರಿಯನ್, ಮಾತಿನ ಭಾಗದ ಚಿತ್ರೀಕರಣ ಮುಗಿಸಿ, ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಕಥೆ, ಸಂಭಾಷಣೆ ಜವಾಬ್ದಾರಿಯನ್ನು ನಿರ್ದೇಶಕರೇ ವಹಿಸಿಕೊಂಡಿದ್ದಾರೆ. ಸರೋಜಿನಿ ಸಿನಿಮಾಸ್ ಬ್ಯಾನರ್‌ನಡಿ ಎಸ್.ಕೆಂಪೇಗೌಡ ದೊಡ್ಡಬಳ್ಳಾಪುರ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಸುನೀಲ್ ದರ್ಶನ್ ನಾಯಕರಾಗಿದ್ದಾರೆ. ಇದು ಇವರಿಗೆ ಮೊದಲ ಸಿನಿಮಾ. ನಾಯಕಿಯರಾಗಿ ಶರಣ್ಯಗೌಡ ಹಾಗು ಕೀರ್ತಿ ಕೃಷ್ಣ ನಟಿಸಿದರೆ, ವಿಶೇಷ ಪಾತ್ರದಲ್ಲಿ ದೀಪಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಪ್ರಶಾಂತ್, ಶ್ರುತಿ, ಅಂಜಲಿ, ಶಾರದ, ಸುಮಾ, ಮುಂತಾದವರು ಅಭಿನಯಿಸುತ್ತಿದ್ದಾರೆ.
ಚಿತ್ರವನ್ನು ಚಿಕ್ಕಮಗಳೂರು, ಮಾಣಿಕ್ಯದಾರ, ಸಕಲೇಶಪುರ, ಶ್ರೀನಿವಾಸ ಸಾಗರ, ನಂದಿಬೆಟ್ಟ ಸುತ್ತಮುತ್ತಲ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಇದೊಂದು ಯುವಕರ ಪ್ರೀತಿ, ಪ್ರೇಮದ ಸುತ್ತ ನಡೆಯುವ ಕಥೆ. ಅವರ ಬದುಕಿನ ಸಾಧಕ-ಬಾಧಕಗಳ ಕುರಿತಾದ ಚಿತ್ರಣ ಇಲ್ಲಿದೆ.
ಇನ್ನು, “ಶೋಕಿ’ ಶೀರ್ಷಿಕೆಗೆ “ಮಾಡೋಕೆ ಆಧಾರ್ ಕಾರ್ಡ್ ಬೇಕಿಲ್ಲ’ ಎಂಬ ಅಡಿಬರಹವಿದೆ. ಹುಡುಗಿಯೊಬ್ಬಳ ಬದುಕಲ್ಲಿ ಶೋಕಿದಾರನೊಬ್ಬನ ಎಂಟ್ರಿಯಾಗಿ, ಅವಳ ಲೈಫಲ್ಲಿ ಹೇಗೆಲ್ಲಾ ಆಟ ಆಡ್ತಾನೆ, ಆಮೇಲೆ ಏನೆಲ್ಲಾ ಆಗುತ್ತದೆ ಎಂಬುದು ಒನ್‌ಲೈನ್ ಸ್ಟೋರಿ ಎಂಬುದು ನಿರ್ದೇಶಕ ವಿಷ್ಣು ಪ್ರಿಯನ್ ಮಾತು.
ಚಿತ್ರಕ್ಕೆ ವಾಸನ್ ಛಾಯಾಗ್ರಹಣ ಮಾಡಿದ್ದಾರೆ. ಹರ್ಷ ಅವರು ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಚಿತ್ರದ ಹಾಡುಗಳು ಬಾಕಿ ಉಳಿದಿವೆ. ಮಳೆಗಾಲದಲ್ಲಿ ಹಾಡುಗಳನ್ನು ಚಿತ್ರೀಕರಿಸುವ ಯೋಚನೆ ಚಿತ್ರಕ್ಕಿದೆ. ಸದ್ಯ ಚಿತ್ರಕ್ಕೆ ಸಂಕಲನ ಹಾಗು ಡಬ್ಬಿಂಗ್ ನಡೆಯುತ್ತಿದೆ. ರಾಜೇಂದ್ರ ಹೆಗಡೆ ಸಹನಿರ್ದೇಶನವಿರುವ ಚಿತ್ರವನ್ನು ಗೌರಿ ಗಣೇಶ ಹಬ್ಬದಂದು ತೆರೆಗೆ ತರಲು ನಿರ್ಮಾಪಕರು ತಯಾರಿ ನಡೆಸುತ್ತಿದ್ದಾರೆ.