ಮುಖವಾಡ… ಕನ್ನಡದಲ್ಲಿ ಈ ಹೆಸರಿನ ಚಿತ್ರ ಬಂದಿತ್ತು. ಎಂಬತ್ತರ ದಶಕದಲ್ಲಿ ರಾಮಕೃಷ್ಣ ಹಾಗೂ ತಾರಾ ಅಭಿನಯಿಸಿದ್ದ ಚಿತ್ರವಿದು. ಎಲ್ಲಾ ಸರಿ, ಹೀಗೇಕೆ “ಮುಖವಾಡ’ ವಿಷಯ ಎಂಬ ಪ್ರಶ್ನೆಗೆ ಉತ್ತರ, ಈಗ ಇದೇ ಹೆಸರಿನ ಚಿತ್ರವೊಂದು ಇತ್ತೀಚೆಗೆ ಸೆಟ್ಟೇರಿದೆ. ಹೌದು, ಸಸ್ಪೆನ್ಸ್ ಹಾಗು ಥ್ರಿಲ್ಲರ್ ಜೊತೆಗೆ ಸ್ವಲ್ಪ ಹಾರರ್ ಫೀಲ್ ಕೊಡುವ ಚಿತ್ರವಿದು. ಚಿತ್ರದ ಶೀರ್ಷಿಕೆಗೆ ತಕ್ಕಂತೆ, ಯಾರು ಮುಖವಾಡ ಧರಿಸುತ್ತಾರೆ,
ವ್ಯಕ್ತಿಯೊಬ್ಬನ ವ್ಯಕ್ತಿತ್ವ ಹೇಗೆಲ್ಲಾ ಇರುತ್ತೆ ಒಳಗೊಂದು, ಹೊರಗೊಂದು ಇರುವ ಬುದ್ಧಿಯಿಂದಾಗಿ ಏನೆಲ್ಲಾ ಘಟನೆಗಳು ನಡೆಯುತ್ತವೆ ಎಂಬ ಕಥೆ ಇಲ್ಲಿದೆ. ಚಿತ್ರದಲ್ಲಿ ಬೆರಳೆಣಿಕೆ ಪಾತ್ರಗಳಿವೆ. ಪ್ರತಿ ಪಾತ್ರಕ್ಕೂ ಆದ್ಯತೆ ಕೊಡಲಾಗಿದೆ. ಆರಂಭದಲ್ಲಿ ಕಥೆ ಶುರು ಮಾಡಿದಾಗ ಹೊಸಬರ ಜೊತೆ ಕೆಲಸ ಮಾಡುವ ಯೋಚನೆ ಚಿತ್ರದ ನಿರ್ದೇಶಕ ಸಹದೇವ ಅವರಿಗಿತ್ತಂತೆ. ಕೊನೆಗೆ, ಚಿತ್ರಕಥೆ ಹಾಗೂ ಪಾತ್ರದೊಳಗಿನ ಗಟ್ಟಿತನ ನೋಡಿದಾಗ, ಸ್ವಲ್ಪ ಅಭಿನಯ ಗೊತ್ತಿರುವ ನಟರ ಮೊರೆ ಹೋಗಬೇಕೆಂದೆನಿಸಿ, ಪವನ್ ತೇಜ್ ಅವರನ್ನು ನಾಯಕರನ್ನಾಗಿಸಿದ್ದಾರೆ.
ಪವನ್ ತೇಜ್ ಅವರು ಇಲ್ಲಿ ಶಂಕರ್‌ನಾಗ್ ಅಭಿಮಾನಿಯಾಗಿ ಕಾಣಿಸಿಕೊಂಡರೆ, ಶಿಲ್ಪಾ ಮಂಜುನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವರಿಗೆ ಕಥೆಯ ಒನ್‌ಲೈನ್ ಮಾತ್ರ ಗೊತ್ತಂತೆ. ಉಳಿದದ್ದನ್ನು ಕೇಳದೆ ನಟಿಸಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಇನ್ನು, ಚಿತ್ರದಲ್ಲಿ ವಿನೋದ್‌ರಾಜ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಆ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂಬುದು ಚಿತ್ರತಂಡದ ಮಾತು.
ಚಿತ್ರಕ್ಕೆ ಮಂಜು ಸಂಗೀತವಿದೆ. ವಿನಯ್ ಪಾಂಡವಪುರ, ಸೂರಿ ಸಾಹಿತ್ಯವಿದೆ. ಆನಂದ್ ಗುಬ್ಬಿ ಅವರ ಛಾಯಾಗ್ರಹಣವಿದೆ. ವೆಂಕಿ ಅವರ ಸಂಕಲನ, ಮಾಸ್‌ಮಾದ, ವಿಕ್ರಂಮೋರ್ ಅವರ ಸಾಹಸವಿದೆ. ಮೋಹನ್ ನೃತ್ಯ ನಿರ್ದೇಶಕರು. ಮೋಟಗಾನ ಹಳ್ಳಿ ಸಿ.ಎಂ.ಮಲ್ಲೇಶ್ ಎಸ್.ಕೆ.ಬ್ರದರ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿಜಯ ಬಾಬು, ಲಕ್ಷೀ ನಾರಾಯಣ ಕಾರ್ಯಕಾರಿ ನಿರ್ಮಾಪಕರು. ಬೆಂಗಳೂರು, ಮೈಸೂರು, ಕೇರಳ ಹಾಗು ಬಾಗಲಕೋಟೆಯಲ್ಲಿ ಚಿತ್ರೀಕರಣ ನಡೆಯಲಿದೆ. ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ.