ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಕಾಲಬ್ರಹ್ಮ’ ಚಿತ್ರ ಸದ್ದಿಲ್ಲದೆ ಚಿತ್ರ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ತನ್ನ ಆಡಿಯೋ ಬಿಡುಗಡೆ ಮಾಡಿದೆ.
ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ, ಉಪಾಧ್ಯಕ್ಷ ಕರಿಸುಬ್ಬು, ಕಾರ್ಯದರ್ಶಿ ಭಾ.ಮಾ ಹರೀಶ್, ಶಿಲ್ಪಾ ಶ್ರೀನಿವಾಸ್ ಅತಿಥಿಗಳಾಗಿ ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
“ಕಾಲಬ್ರಹ್ಮ’ ಚಿತ್ರದಲ್ಲಿ ಪ್ರತಾಪ್ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಜೊತೆಗೆ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ಪ್ರತಾಪ್ ಅವರೇ ಹೊತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಬೇಲೂರು ಮೂಲದ ಹುಡುಗಿ ಸಹನಾ ಜೋಡಿಯಾಗಿದ್ದಾರೆ. ಕಿರುತೆರೆ ನಟಿ ರಂಜಿತ ಸೂರ್ಯವಂಶಿ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹಲವು ಹೊಸ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಾಯಕ ಪ್ರತಾಪ್, “ಈ ಕತೆಯನ್ನು ಚಿತ್ರ ಮಾಡಬೇಕೆಂದುಕೊಂಡಾಗ ನಿರ್ಮಾಪಕರು, ನಿರ್ದೇಶಕರು ಸಿಕ್ಕರು. ಕೊನೆಗೆ ಅನಿವಾರ್ಯ ಕಾರಣದಿಂದ ಇಬ್ಬರು ಹಿಂದಕ್ಕೆ ಹೋದಾಗ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಬೇಕಾಯಿತು. ಇಲ್ಲಿಯವರೆಗೆ ಕೆಲವು ಚಿತ್ರಗಳಲ್ಲಿ ಸಹ ಕಲಾವಿದನಾಗಿ ಅಭಿನಯಿಸಿದ್ದೇನೆ. ಅದೇ ಅನುಭವ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ಸಹಕಾರಿಯಾಯಿತು’ ಎಂದರು.
ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡುತ್ತಾ, “ಇತ್ತೀಚೆಗೆ ಚಿತ್ರರಂಗಕ್ಕೆ ಹೊಸಬರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆ. ಆದರೆ ಅನೇಕರು, ನಮ್ಮಂತವರನ್ನು ಹಳಬರು, ಔಟ್ ಡೇಟೆಡ್ ಎಂದು ಅವಕಾಶ ಕೊಡಲು ನಿರಾಕರಿಸುತ್ತಾರೆ. ಮುಂದೆ ಫಲಿತಾಂಶ ಏನೆಂದು ಎಲ್ಲರಿಗೂ ಗೊತ್ತಾಗುತ್ತದೆ. ಕೆಲವರು ಇನ್ನಿಲ್ಲದಂತೆ ತಮ್ಮ ಚಿತ್ರದ ಬಗ್ಗೆ ಹಾಗೆ ಅತಿಯಾಗಿ ಆಶ್ವಾಸನೆಗಳನ್ನು ಕೊಟ್ಟು, ಹಾಗೆ ಬರುತ್ತದೆ, ಹೀಗೆ ಬರುತ್ತದೆ, ಸೂಪರ್ ಹಿಟ್ ಆಗಲಿದೆ ಅಂತ ಕೆಲಸವನ್ನು ಚೆನ್ನಾಗಿ ತೆಗೆಸಿಕೊಳ್ಳುತ್ತಾರೆ. ಕೊನೆಗೆ ಸಿನಿಮಾ ನೋಡಿದಾಗ ಇಂತಹ ಚಿತ್ರಕ್ಕೆ ಕೆಲಸ ಮಾಡಿದ್ದು ಹಾಳಾಯಿತಲ್ಲಾ ಅಂತ ಒದೆಯುವಷ್ಟು ಕೋಪ ಬರುತ್ತದೆ’ ಎಂದು ತಮ್ಮ ಬೇಸರವನ್ನು ಹೊರಹಾಕಿದರು.
“ಕಾಲಬ್ರಹ್ಮ’ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ವಿ. ಮನೋಹರ್ ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಚಿತ್ರವನ್ನು ದೊಡ್ಡಬಳ್ಳಾಪುರ, ಮುಳಬಾಗಿಲು, ಕೋಲಾರ ಮೊದಲಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ.
ಇನ್ನು “ಕಾಲಬ್ರಹ್ಮ’ ಚಿತ್ರ ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ದಾಯಾದಿಗಳ ನಡುವಿನ ವೈಷಮ್ಯ, ತಾಯಿ ಹಾಗೂ ಮುಗ್ಧ ಮಗನ ನಡುವಿನ ಕಥಾಹಂದರವನ್ನು ಹೊಂದಿದೆ. ಮೂಢನಂಬಿಕೆ ವಿರುದ್ದ ಹೋರಾಡುವಾಗ ಬೇರೆಯವರ ತಪ್ಪಿಗೆ ಹೇಗೆ ಬಲಿಪಶುಗಳಾಗಬೇಕಾಗುತ್ತದೆ. ಅದರಿಂದ ಹೊರಬರುವುದು ಹೇಗೆ, ಮೂಢನಂಬಿಕೆಗಳಿಂದಾಗುವ ಅನಾಹುತಗಳೇನು ಎಂಬ ಸಂಗತಿಗಳ ಸುತ್ತ ಚಿತ್ರದ ನಡೆಯಲಿದೆ ಎನ್ನುತ್ತದೆ ಚಿತ್ರತಂಡ.
ಇತ್ತೀಚೆಗಷ್ಟೇ ಚಿತ್ರವನ್ನು ವೀಕ್ಷಿಸಿರುವ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ “ಯು’ ಸರ್ಟಿಫಿಕೇಟ್ ಕೊಟ್ಟು ಬಿಡುಗಡೆಗೆ ಅಸ್ತು ಎಂದಿದೆ. ಸದ್ಯ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಅಂತಿಮ ಹಂತದ ಕಸರತ್ತು ನಡೆಸುತ್ತಿರುವ “ಕಾಲಬ್ರಹ್ಮ’ ಚಿತ್ರತಂಡ, ಮುಂದಿನ ಮಾಚ್ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.